ನವದೆಹಲಿ: ತನ್ನ ಮಗ ಯುವರಾಜ್ ಕ್ರಿಕೆಟ್ ಜೀವನ ಅಂತ್ಯಗೊಳ್ಳಲು ಮಹೇಂದ್ರ ಸಿಂಗ್ ಧೋನಿ ಕಾರಣ ಎಂದು ಸದಾ ಕಿಡಿ ಕಾರುತ್ತಿದ್ದ ಯೋಗರಾಜ್ ಸಿಂಗ್ ಆ ಲಿಸ್ಟ್ಗೆ ವಿರಾಟ್ ಕೊಹ್ಲಿಯನ್ನೂ ಸೇರಿಸಿದ್ದಾರೆ.
2011 ವಿಶ್ವಕಪ್ ನಂತರ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದ ಯುವರಾಜ್ ನಂತರ ಕ್ರಿಕೆಟ್ಗೆ ಮರಳಿದಾರಾದರೂ ಅವರಿಗೆ ಹೆಚ್ಚಿನ ಅವಕಾಶ ಸಿಗಲಿಲ್ಲ. 2015ರ ವಿಶ್ವಕಪ್ನಲ್ಲಿ ಆಡುವ ಅವಕಾಶವೂ ಅವರ ಪಾಲಿಗೆ ದೊರೆಯಲೇ ಇಲ್ಲ. ಆದರೆ ಇದಕ್ಕೆ ಕಾರಣ ಧೋನಿ ಎಂದು ಯೋಗರಾಜ್ ಸಿಂಗ್ ಅಂದಿನಿಂದಲೂ ನೇರವಾಗಿ ಆರೋಪಿಸಿಕೊಂಡು ಬರುತ್ತಿದ್ದಾರೆ.
ಇದೀಗ ಧೋನಿ ಮಾತ್ರವಲ್ಲ, ಪ್ರಸ್ತುತ ಭಾರತ ಕ್ರಿಕೆಟ್ ಅನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿರುವ ವಿರಾಟ್ ಕೊಹ್ಲಿಯನ್ನು ತೆಗಳಿರುವ ಯೋಗರಾಜ್ ಧೋನಿ ಹಾಗೂ ಕೊಹ್ಲಿ ಕೂಡ ಯುವಿಗೆ ಬೆಂಬಲ ಕೊಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಉತ್ತಮ ಪ್ರದರ್ಶನ ತೋರಿದರೂ ಯುವಿಗೆ ಧೋನಿ, ಕೊಹ್ಲಿ ಬೆಂಬಲ ಕೊಡಲಿಲ್ಲ. ಯುವಿ ಬೆನ್ನಿಗೆ ಚೂರಿ ಹಾಕಿದ್ದು ಇವರಿಬ್ಬರಷ್ಟೇ ಅಲ್ಲ, ಆಯ್ಕೆ ಸಮಿತಿ ಸದಸ್ಯರಾಗಿದ್ದ ಶರಣ್ ದೀಪ್ ಸಿಂಗ್ ಕೂಡ ಯುವಿ ಆಯ್ಕೆಯನ್ನು ಸದಾ ಪ್ರಶ್ನಿಸುತ್ತಿದ್ದರು. ಕ್ರಿಕೆಟ್ ಬಗ್ಗೆ ಏನೂ ತಿಳಿಯದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?. ತುಂಬಾ ಬೇಕಾದವರೆ ದ್ರೋಹ ಬಗೆದರು " ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು 2011 ರ ವಿಶ್ವಕಪ್ನಲ್ಲಿ ಎಂಎಸ್ ಧೋನಿ ಯುವರಾಜ್ಗಿಂತ ಸುರೇಶ್ ರೈನಾ ಅವರ ಬೆಂಬಲಕ್ಕೆ ನಿಲ್ಲುತ್ತಿದ್ದರು. ನಾನು ಕೇಳಿದ ಹಾಗೆ ಭಾರತ ತಂಡದಲ್ಲಿ ಸುರೇಶ್ ರೈನಾಗೆ ಸಿಕ್ಕ ಅವಕಾಶಗಳು ಯುವರಾಜ್ಗೆ ಸಿಗುತ್ತಿರಲಿಲ್ಲ. ಈ ಮಾತನ್ನು ಕೆಲವು ದಿನಗಳ ಹಿಂದೆ ಯುವಿಯೇ ತಿಳಿಸಿದ್ದಾರೆ. ಅವನಷ್ಟೇ ಅಲ್ಲ, ತುಂಬಾ ಕ್ರಿಕೆಟಿಗರು ಈ ಮಾತು ಹೇಳಿರುವುದಾಗಿ ಯೋಗರಾಜ್ ತಿಳಿಸಿದ್ದಾರೆ.
ಇತ್ತೀಚೆಗೆ ರವಿ(ಶಾಸ್ತ್ರಿ)ಯನ್ನು ಭೇಟಿ ಮಾಡಿದ್ದೆ, ಆತ ಒಂದು ಫೋಟೋಗ್ರಾಫ್ ಕೇಳಿದ್ದರು. ಈ ಸಂದರ್ಭದಲ್ಲಿ ಭಾರತ ತಂಡಕ್ಕೆ ಆಡುವ ಹೆಸರಾಂತ ಕ್ರಿಕೆಟಿಗರಿಗೆ ಬೀಳ್ಕೊಡುಗೆ ಪಂದ್ಯವಾಡುವ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದೇನೆ. ಅದು ರೋಹಿತ್, ಕೊಹ್ಲಿ ಅಥವಾ ಧೋನಿ ಯಾರಾದರೂ ಅವರಿಗೆ ವಿದಾಯದ ಪಂದ್ಯದ ಅವಕಾಶ ಕಲ್ಪಿಸಬೇಕು ಎಂದು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
2019 ರ ವಿಶ್ವಕಪ್ನಲ್ಲಿ ಅವಕಾಶ ಸಿಗದಿದ್ದ ಕಾರಣಕ್ಕಾಗಿ 2019 ಜೂನ್ 10 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು.