ಜಮೈಕಾ: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲೂ ಟೀಂ ಇಂಡಿಯಾ ಬರೋಬ್ಬರಿ 257ರನ್ಗಳ ಅಂತರದ ಗೆಲುವು ದಾಖಲು ಮಾಡುವ ಮೂಲಕ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಇದರ ಜತೆಗೆ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ನೂತನ ದಾಖಲೆ ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.
ಜಮೈಕಾದ ಕಿಂಗ್ಸ್ಟನ್ನಲ್ಲಿನ ಸಬಿನಾ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ವಿರಾಟ್ ಪಡೆ ಗೆಲುವು ದಾಖಲು ಮಾಡುತ್ತಿದ್ದಂತೆ ಧೋನಿ ಹೆಸರಿನಲ್ಲಿದ್ದ ಈ ದಾಖಲೆ ಬ್ರೇಕ್ ಆಗಿದ್ದು, ಭಾರತ ತಂಡವನ್ನ ಮುನ್ನಡೆಸಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿರುವ ನಾಯಕ ಎಂಬ ದಾಖಲೆ ಕೊಹ್ಲಿ ಪಾಲಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ದಾಖಲು ಮಾಡುತ್ತಿದ್ದಂತೆ ಕೊಹ್ಲಿ, ಎಂಎಸ್ ಧೋನಿ ದಾಖಲೆ ಸರಿದೂಗಿಸಿದ್ದರು.
60 ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ ತಂಡವನ್ನ ಮುನ್ನಡೆಸಿದ್ದ ಮಾಹಿ 27ರಲ್ಲಿ ಗೆಲುವು, 18ರಲ್ಲಿ ಸೋಲು ಕಂಡು, 15 ಪಂದ್ಯಗಳಲ್ಲಿ ಭಾರತ ಡ್ರಾ ಸಾಧಿಸಿತ್ತು. 48 ಪಂದ್ಯಗಳಲ್ಲಿ ಟೀಂ ಇಂಡಿಯಾ ಮುನ್ನಡೆಸಿರುವ ವಿರಾಟ್, 28ರಲ್ಲಿ ಗೆಲುವು,10 ಸೋಲು ಹಾಗೂ 10 ಪಂದ್ಯ ಡ್ರಾ ಆಗಿವೆ. ತದನಂತರ ಸೌರವ್ ಗಂಗೂಲಿ 49 ಟೆಸ್ಟ್ ಪಂದ್ಯಗಳಲ್ಲಿ ಟೆಸ್ಟ್ ತಂಡವನ್ನ ಮುನ್ನಡೆಸಿದ್ದು,21ರಲ್ಲಿ ಗೆಲುವು, 13ರಲ್ಲಿ ಸೋಲು ಹಾಗೂ 15 ಪಂದ್ಯ ಡ್ರಾ ಆಗಿವೆ. ಇನ್ನು ಅಜರುದ್ದೀನ್ 47 ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸಿದ್ದು, 14ರಲ್ಲಿ ಗೆಲುವು, 14 ಸೋಲು ಹಾಗೂ 19 ಪಂದ್ಯ ಡ್ರಾ ಆಗಿವೆ.
ಇನ್ನು 2011ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಡೆಬ್ಯು ಮಾಡಿದ್ದ ವಿರಾಟ್, 2016ರಲ್ಲಿ ಮೊದಲ ಟೆಸ್ಟ್ ದ್ವಿಶತಕಗಳಿಸಿದ್ದು, 2019ರಲ್ಲಿ ವಿಶ್ವದ ಯಶಸ್ವಿ ಟೆಸ್ಟ್ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ. ಜತೆಗೆ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ನಲ್ಲಿ ಬರೋಬ್ಬರಿ 318ರನ್ಗಳ ಗೆಲುವು ದಾಖಲು ಮಾಡುವ ಮೂಲಕ ಅತಿ ದೊಡ್ಡ ಅಂತರದ ಜಯ ದಾಖಲು ಮಾಡಿದೆ.