ದೆಹಲಿ: ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಪ್ರಚಂಡ ಫಾರ್ಮ್ ಮುಂದುವರಿಸಿರುವ ಕರ್ನಾಟಕದ ಯುವ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್, ಕೇರಳ ವಿರುದ್ಧ ನಡೆಯುತ್ತಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲೂ ಶತಕ ಸಿಡಿಸಿ ಅಬ್ಬರಿಸಿದರು.
ಈ ಮೂಲಕ ಟೂರ್ನಿಯಲ್ಲಿ ಪಡಿಕ್ಕಲ್ ಸತತ 6ನೇ, 50 ಅಥವಾ ಅದಕ್ಕಿಂತ ಹೆಚ್ಚು ರನ್ ಹಾಗೂ ಸತತ 4ನೇ ಶತಕ ದಾಖಲಿಸಿದರು. ಅವರು 119 ಎಸೆತಗಳಲ್ಲಿ 10 ಬೌಂಡರಿಸಹಿತ 2 ಸಿಕ್ಸರ್ ಸೇರಿ 101 ರನ್ಗಳಿಸಿದ್ದಾರೆ. ಈ ಮೂಲಕ ಸತತ ಎರಡನೇ ಆವೃತ್ತಿಯಲ್ಲೂ ಟೂರ್ನಿಯ ಗರಿಷ್ಠ ರನ್ ಸರದಾರರಾದರು.
ಅಲ್ಲದೇ, 50 ಓವರ್ಗಳ ಪಂದ್ಯದಲ್ಲಿ ಈ ಸಾಧನೆ ಮಾಡಿದ ವಿಶ್ವದ 3ನೇ ಬ್ಯಾಟ್ಸ್ಮನ್ ಎಂಬ ಶ್ರೇಯಕ್ಕೂ ಪಡಿಕ್ಕಲ್ ಪಾತ್ರರಾಗಿದ್ದಾರೆ. ಈ ಮೊದಲು ಶ್ರೀಲಂಕಾದ ದಿಗ್ಗಜ ಕುಮಾರ ಸಂಗಕ್ಕಾರ 2015 ವಿಶ್ವಕಪ್ನಲ್ಲಿ ಸತತ 4 ಶತಕ ಸಿಡಿಸಿದ್ದರು. ಇವರನ್ನು ಹೊರೆತುಪಡಿಸಿದರೆ, ದಕ್ಷಿಣ ಆಫ್ರಿಕಾದ ಆಲ್ವಿರೋ ಪೀಟರ್ಸನ್ ಈ ಸಾಧನೆ ಮಾಡಿದ್ದರು.
ಪಡಿಕ್ಕಲ್ ಕಳೆದ 6 ಇನ್ನಿಂಗ್ಸ್ಗಳಲ್ಲಿ ಉತ್ತರ ಪ್ರದೇಶದ ವಿರುದ್ಧ 52, ಬಿಹಾರ್ ವಿರುದ್ಧ 97, ಒಡಿಶಾ ವಿರುದ್ಧ 152, ಕೇರಳ ವಿರುದ್ಧ 126, ರೈಲ್ವೇಸ್ ವಿರುದ್ಧ 145 ಹಾಗೂ ಇಂದು ಕ್ವಾರ್ಟರ್ ಫೈನಲ್ನಲ್ಲಿ ಕೇರಳ ವಿರುದ್ಧ 101 ರನ್ಗಳಿಸಿದ್ದಾರೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ 2008ರಲ್ಲಿ 4 ಶತಕ ಸಿಡಿಸಿದ್ದರು. ಇದೀಗ ಆರ್‌ಸಿಬಿ ತಂಡದಲ್ಲಿ ಕೊಹ್ಲಿ ಜೊತೆಯಾಡುವ ಪಡಿಕ್ಕಲ್ ಕೂಡ 4 ಶತಕ ದಾಖಲಿಸಿ ಭವಿಷ್ಯದ ತಾರೆ ಎನಿಸಿಕೊಂಡಿದ್ದಾರೆ. ಟೂರ್ನಿಯುದ್ದಕ್ಕೂ ಪಡಿಕ್ಕಲ್ಗೆ ಸಾಥ್ ನೀಡಿರುವ ಆರ್. ಸಮರ್ಥ್ ಕೂಡ 3 ಶತಕ ಸಹಿತ 605 ರನ್ ಕಲೆಹಾಕಿ 2ನೇ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ.
ಇದನ್ನೂ ಓದಿ: ಏ. 9 ರಿಂದ ಐಪಿಎಲ್: ಮುಂಬೈ-ಆರ್‌ಸಿಬಿ ಮೊದಲ ಫೈಟ್; ಮೋದಿ ಕ್ರೀಡಾಂಗಣದಲ್ಲಿ ಫೈನಲ್