ಡರ್ಬಿಶೈರ್: ಮೊಹಮ್ಮದ್ ಅಮೀರ್ ಕೇವಲ 27 ವಯಸ್ಸಿಗೆ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದಾಗ ನನಗೆ ತುಂಬಾ ನೋವುಂಟು ಮಾಡಿತ್ತು ಎಂದು ಪಾಕಿಸ್ತಾನ ತಂಡದ ಬೌಲಿಂಗ್ ಕೋಚ್ ವಕಾರ್ ಯೂನಿಸ್ ತಿಳಿಸಿದ್ದಾರೆ.
ಮೊದಲಿಗೆ ಅಮೀರ್ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ಗಳ ಟಿ-20 ಸರಣಿಗೆ ತಾವೂ ಲಭ್ಯರಿರುವುದಿಲ್ಲ ಎಂದು ತಿಳಿಸಿದ್ದರು. ಆದರೆ, ಎರಡನೇ ಮಗುವಿಗೆ ತಂದೆಯಾಗುತ್ತಿದ್ದಂತೆ ತಮ್ಮ ನಿರ್ಧಾರ ಬದಲಿಸಿಕೊಂಡಿರುವ ಅವರು ತಾವೂ ಪ್ರವಾಸಕ್ಕೆ ಸಿದ್ದ ಎಂದು ತಿಳಿಸಿ ಕೋವಿಡ್ 19 ಟೆಸ್ಟ್ಗೂ ಒಳಗಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಗಾಗಿ ಪಾಕಿಸ್ತಾನದ ಮುಖ್ಯ ಆಯ್ಕೆಗಾರ ಹಾಗೂ ಮುಖ್ಯ ಕೋಚ್ ಆಗಿರುವ ಮಿಸ್ಬಾ ಉಲ್ ಹಕ್ ಅಮೀರ್ ಅವರನ್ನು ಸಂಪರ್ಕಿಸಿದ್ದರು. ತಕ್ಷಣ ಸಿದ್ದವಾಗಿರುವುದಾಗಿ ಹೇಳಿದ್ದ ಅವರು ಎರಡು ಬಾರಿ ಕೋವಿಡ್ 19 ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ಫಲಿತಾಂಶ ಬಂದ ತಕ್ಷಣ ಇಂಗ್ಲೆಂಡ್ಗೆ ಪಯಣ ಬೆಳೆಸಿದ್ದಾರೆ.
ಅಮೀರ್ ಬಗ್ಗೆ ಮಾತನಾಡಿರುವ ವಕಾರ್, " ಅಮೀರ್ ಅನುಭವಿ ಬೌಲರ್ ಮತ್ತು ಅವರು ನಮ್ಮ ವೈಟ್ ಬಾಲ್ ಯೋಜನೆಗಳಲ್ಲಿದ್ದರು. ನಾವು ಎಷ್ಟು ಸಾಧ್ಯವೋ ಅಷ್ಟು ಸಿದ್ದ ಬೌಲರ್ಗಳನ್ನು ತಂಡದಲ್ಲಿ ಹೊಂದುವ ಅವಕಾಶಗಳನ್ನು ಉಪಯೋಗಿಸಿಕೊಳ್ಳುತ್ತಿದ್ದೇವೆ "ಎಂದು ತಿಳಿಸಿದ್ದಾರೆ.
ಅಮೀರ್ ಒಬ್ಬ ಅದ್ಭುತ ಬೌಲರ್ ಮತ್ತು ನಿರ್ಣಾಯಕ ಸಮಯದಲ್ಲಿ ಅವರು ಟೆಸ್ಟ್ ಕ್ರಿಕೆಟ್ ತೊರೆದದ್ದು ನಮಗೆ ನೋವುಂಟು ಮಾಡಿತ್ತು. ಆ ಸಂದರ್ಭದಲ್ಲಿ ನಾವೆಲ್ಲರೂ ಅವರ ನಿರ್ಧಾರದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದೇವೆ. ಆದರೆ ಇದೀಗ ನಾವು ಮುಂದುವರೆದಿದ್ದೇವೆ ಮತ್ತು ಅವರು ಎಲ್ಲಿ ನಿಂತಿದ್ದಾರೆ ಎಂಬುದನ್ನು ಮಾತ್ರ ನಾವು ನೋಡಬೇಕಾಗಿದೆ" ಎಂದಿದ್ದಾರೆ ವಕಾರ್ ಯೂನಿಸ್
ಅಮೀರ್ ಅವರು ಟೆಸ್ಟ್ ಕ್ರಿಕೆಟ್ ತ್ಯಜಿಸಿದ ನಂತರ ಪಾಕಿಸ್ತಾನ ತಂಡ ಹೊಸಬರಾದ ನಸೀಮ್ ಷಾ, ಶಾಹೀನ್ ಶಾ ಅಫ್ರಿದಿ ಮತ್ತು ಮೊಹಮ್ಮದ್ ಅಬ್ಬಾಸ್ ಅವರನ್ನು ಟೆಸ್ಟ್ ಕ್ರಿಕೆಟ್ಗೆ ಕರೆತಂದಿದೆ.