ಅಹಮದಾಬಾದ್: ಭಾರತದ ವೇಗದ ಬೌಲಿಂಗ್ ವಿಭಾಗ ಸುಧಾರಿಸಲು ಮುಖ್ಯ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ ಎಂದು ಭಾರತ ತಂಡದ ಹಾಗೂ ಕರ್ನಾಟಕ ತಂಡದ ಮಾಜಿ ಆಟಗಾರ ಆರ್. ವಿನಯ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ
ಇಂಡಿಯನ್ ಪ್ರೀಮಿಯರ್ ಲೀಗ್ ಭಾರತೀಯ ವೇಗಿಗಳಿಗೆ ಶ್ರೇಯಾಂಕಗಳನ್ನು ಏರಲು ಸಹಾಯ ಮಾಡುತ್ತದೆ. ಹಾಗೇಯೆ ಅನುಭವಿ ಬೌಲರ್‌ಗಳಿಗೆ ಸಮಯ ತೆಗೆದುಕೊಳ್ಳಲು ಮತ್ತು ಯುವಕರಿಗೆ ತಂಡದಲ್ಲಿ ಸ್ಥಾನ ಪಡೆಯಲು ಈ ಲೀಗ್ ಉತ್ತಮ ವೇದಿಕೆಯಾಗಿದೆ ಎಂದಿದ್ದಾರೆ.
"ನಾನು ಮಾನಸಿಕ ಅಂಶದ ಬಗ್ಗೆ ಮಾತ್ರ ಮಾತನಾಡುತ್ತೇನೆ. ಐಪಿಎಲ್‌ಗೆ ಮನ್ನಣೆ ನೀಡುತ್ತೇನೆ, ಏಕೆಂದರೆ ಐಪಿಎಲ್ ಖಂಡಿತವಾಗಿಯೂ ಎಲ್ಲಾ ಬೌಲರ್‌ಗಳಿಗೆ ವಿಭಿನ್ನವಾಗಿ ಯೋಚಿಸಲು ಮತ್ತು ಅಂತಾರಾಷ್ಟ್ರೀಯ ಕ್ರಿಕೆಟಿಗರೊಂದಿಗೆ ಆಡಲು ಅವಕಾಶವನ್ನು ಪಡೆಯಲು ಸಹಾಯ ಮಾಡಿದೆ. ನೀವು ದೇಶಿಯ ಕ್ರಿಕೆಟ್, ರಣಜಿ ಟ್ರೋಫಿಯನ್ನು ಐದಾರು ವರ್ಷಗಳ ಕಾಲ ಆಡುತ್ತೀರಿ. ಕೇವಲ ಎರಡು ಋತುಗಳಲ್ಲಿ ಐಪಿಎಲ್ ಆಡುವ ಮೂಲಕ ನೀವು ಗಳಿಸುವಂತಹ ಪ್ರಬುದ್ಧತೆ ಅಥವಾ ಅನುಭವ ನಿಮಗೆ ಉತ್ತಮ ವೇದಿಕೆಯಾಗಲಿದೆ "ಎಂದು ವಿನಯ್ ಕುಮಾರ್ ತಿಳಿಸಿದರು.
"ಐಪಿಎಲ್‌ನಲ್ಲಿ ಎಬಿ ಡಿವಿಲಿಯರ್ಸ್, ಡೇವಿಡ್ ವಾರ್ನರ್, ಕ್ರಿಸ್ ಗೇಲ್, ರೋಹಿತ್ ಶರ್ಮಾ ಅವರಂತಹ ಆಟಗಾರರಿಗೆ ಬೌಲಿಂಗ್ ಮಾಡುವುದು ಅಥವಾ ಡಗ್ ಔಟ್‌ನಲ್ಲಿ ಕುಳಿತು ಅವರನ್ನು ನೋಡುವುದು - ಆ ರೀತಿಯ ಮೋಲ್ಡಿಂಗ್ ಅವರ ಆಟವನ್ನು ತ್ವರಿತವಾಗಿ ಅರ್ಥಮಾಡಿಕೊಳ್ಳಲು ಮತ್ತು ಹೊಂದಾಣಿಕೆಯನ್ನು ತರಲು ನಿಮಗೆ ಸಹಾಯ ಮಾಡುತ್ತದೆ. ಅಂತಾರಾಷ್ಟ್ರೀಯ ಕ್ರಿಕೆಟಿಗರೊಂದಿಗೆ ಕೆಲಸ ಮಾಡುವುದು ನಿಮ್ಮ ಆಲೋಚನೆಯನ್ನ ಬೇರೆ ಹಂತಕ್ಕೆ ತಲುಪಿಸುತ್ತದೆ "ಎಂದು ಮಾಜಿ ಕ್ರಿಕೆಟಿಗ ಹೇಳಿದರು.
ಓದಿ : ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ 'ದಾವಣಗೆರೆ ಎಕ್ಸ್ಪ್ರೆಸ್' ವಿನಯ್ ಕುಮಾರ್!
"ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಡೇಲ್ ಸ್ಟೇನ್ ಮತ್ತು ಜಾಕ್ ಕಾಲಿಸ್ ಅವರೊಂದಿಗೆ ಕೆಲಸ ಮಾಡಿದ್ದು ತುಂಬಾ ಖುಷಿ ತಂದಿದೆ" ಎಂದರು.
ಟೀಂ ಇಂಡಿಯಾ ಪರ ಮೂರು ಮಾದರಿ ಕ್ರಿಕೆಟ್ನಲ್ಲಿ ಆಡಿರುವ ವಿನಯ್ ಕುಮಾರ್, ಒಂದು ಟೆಸ್ಟ್, 31 ಏಕದಿನ ಪಂದ್ಯ ಹಾಗೂ 9 ಟಿ-20 ಕ್ರಿಕೆಟ್ ಪಂದ್ಯ ಆಡಿದ್ದು, 49 ವಿಕೆಟ್ ಪಡೆದುಕೊಂಡಿದ್ದಾರೆ.
2011ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ 30 ರನ್ ನೀಡಿ 4 ವಿಕೆಟ್ ಪಡೆದುಕೊಂಡಿರುವುದು ಇವರ ಶ್ರೇಷ್ಠ ಸಾಧನೆಯಾಗಿದೆ. ವಿನಯ್ ಕುಮಾರ್ 2004-2005ರಲ್ಲಿ ಕರ್ನಾಟಕ ತಂಡದ ರಣಜಿ ಮೂಲಕ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದು, 2007-08ರಲ್ಲಿ ರಣಜಿಯಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಈ ಪ್ರದರ್ಶನದಿಂದಾಗಿ 2009-10ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದರು.