ಮುಂಬೈ: 2020ರ ಐಪಿಎಲ್ ಯಶಸ್ವಿಯಾಗಿ ಮುಗಿದಿದೆ. ಮುಂಬೈ ಇಂಡಿಯನ್ಸ್ ಫೈನಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 5 ವಿಕೆಟ್ಗಳ ಜಯ ಸಾಧಿಸಿ ಈ ವರ್ಷವೂ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಯಶಸ್ವಿಯಾಗಿದೆ.
ಟೂರ್ನಿ ಯಶಸ್ವಿಯಾಗಿ ಮುಗಿದರೂ ಅಭಿಮಾನಿಗಳು ಕೆಲವು ಆಟಗಾರರ ಮೇಲೆ ಇಟ್ಟಿದ್ದ ನಿರೀಕ್ಷೆ ಮಾತ್ರ ಸುಳ್ಳಾಗಿದೆ. ದುಬೈ ಮೈದಾನದಲ್ಲಿ ಬೌಂಡರಿ, ಸಿಕ್ಸರ್ಗಳ ಸುರಿಮಳೆ ಸುರಿಸಲಿದ್ದಾರೆ ಎಂದು ಟಿವಿ ಮುಂದಿದ್ದ ಕುಳಿತಿದ್ದ ಅಭಿಮಾನಿಗಳು ತಮ್ಮಿಷ್ಟದ ಆಟಗಾರರಿಂದ ಕಳಪೆ ಪ್ರದರ್ಶನ ನೋಡಿ ನಿರಾಶೆಗೊಂಡಿದ್ದಾರೆ.
2020ರ ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ತೋರಿದ ಟಾಪ್ ಆಟಗಾರರು
ಎಂ.ಎಸ್.ಧೋನಿ
2019ರ ಏಕದಿನ ವಿಶ್ವಕಪ್ ನಂತರ ಒಂದು ವರ್ಷ ಯಾವುದೇ ಕ್ರಿಕೆಟ್ ಆಡದ ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಕ್ರಿಕೆಟ್ಗೆ ಮರಳುವುದನ್ನು ಇಡೀ ವಿಶ್ವ ಕ್ರಿಕೆಟ್ ಕಾದು ಕುಳಿತಿತ್ತು. ಆದರೆ ಧೋನಿ ಮೇಲಿದ್ದ ಭಾರೀ ನಿರೀಕ್ಷೆ ಐಪಿಎಲ್ನಲ್ಲಿ ಹುಸಿಯಾಯಿತು. ಅವರು 12 ಪಂದ್ಯಗಳಿಂದ ಕೇವಲ 200 ರನ್ ಗಳಿಸಿದರು. ಅವರ ಗರಿಷ್ಠ ಸ್ಕೋರ್ ಕೇವಲ 47 ರನ್. ಧೋನಿಯ ಐಪಿಎಲ್ ಹಿಂದಿನ ಆವೃತ್ತಿಗಳಲ್ಲಿ ನೋಡುವುದಾದರೆ ಇದೇ ಅತ್ಯಂತ ಕಡಿಮೆ ರನ್ ಗಳಿಕೆಯಾಯಿತು. ಅಲ್ಲದೆ ಇದೇ ಮೊದಲ ಬಾರಿಗೆ ಧೋನಿ ನೇತೃತ್ವದ ಸಿಎಸ್ಕೆ ಲೀಗ್ ಹಂತದಲ್ಲೇ ಹೊರಬಿದ್ದಿತು.
ಶೇನ್ ವಾಟ್ಸನ್
ಐಪಿಎಲ್ನಲ್ಲಿ ಕಳೆದ 2 ವರ್ಷಗಳಲ್ಲಿ ಸಿಎಸ್ಕೆ ಫೈನಲ್ ಪ್ರವೇಶಿಸಲು ಪ್ರಮುಖ ಪಾತ್ರ ವಹಿಸಿದ್ದ ಶೇನ್ ವಾಟ್ಸನ್ ಪಂಜಾಬ್ ವಿರುದ್ಧ ಪ್ಲೆಸಿಸ್ ಜೊತೆ 181 ರನ್ಗಳ ಅಜೇಯ ಜೊತೆಯಾಟ ನಡೆಸಿದ್ದು ಹೊರೆತುಪಡಿಸಿದರೆ 13ನೇ ಆವೃತ್ತಿಯಲ್ಲಿ ಭಾರೀ ವೈಫಲ್ಯ ಅನುಭವಿಸಿದರು. ಕೊನೆಗೆ ವಿಧಿಯಿಲ್ಲದೆ ಅವರನ್ನು ಒಂದೆರಡು ಪಂದ್ಯಗಳಲ್ಲಿ ಹೊರಗೆ ಕೂರಿಸಬೇಕಾಯಿತು. ಅವರು ಟೂರ್ನಿಯಲ್ಲಿ ಮೂರು 30+ ರನ್ಗಳ ನೆರವಿನಿಂದ 299 ರನ್ ಗಳಿಸಿ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿಯಾದರು.
ಪೃಥ್ವಿ ಶಾ
ಕಳೆದ ಎರಡು ಆವೃತ್ತಿಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಉತ್ತಮ ಆರಂಭಿಕ ಬ್ಯಾಟ್ಸ್ಮನ್ ಆಗಿದ್ದ ಪೃಥ್ವಿ ಶಾ ಈ ವರ್ಷ ಮಂಕಾದರು. ಮೊದಲಾರ್ಧದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಅವರು ನಂತರ ಭಾರೀ ವೈಫಲ್ಯ ಕಂಡರು. ಅವರು ಡೆಲ್ಲಿ ಪರ ಆಡಿದ 13 ಪಂದ್ಯಗಳಲ್ಲಿ 8 ಬಾರಿ 10ಕ್ಕಿಂತ ಕಡಿಮೆ ಮೊತ್ತಕ್ಕೆ ಔಟಾಗಿದ್ದು, ಅವರ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಭವಿಷ್ಯದ ಸೂಪರ್ ಸ್ಟಾರ್ ಎನಿಸಿಕೊಂಡಿದ್ದ ಶಾ 2 ಅರ್ಧಶತಕ ಸಹಿತ ಟೂರ್ನಿಯಲ್ಲಿ ಕೇವಲ 228 ರನ್ ಗಳಿಸಿ ನಿರಾಶೆ ಮೂಡಿಸಿದರು.
ಮ್ಯಾಕ್ಸ್ವೆಲ್
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸ್ಟಾರ್ ಆಟಗಾರನಾಗಿದ್ದ ಮ್ಯಾಕ್ಸ್ವೆಲ್ ಈ ಟೂರ್ನಿಯಲ್ಲಿ ದಯನೀಯ ವೈಫಲ್ಯ ಅನುಭವಿಸಿದರು. ಅವರ ವೈಫಲ್ಯ ಎಷ್ಟರಮಟ್ಟಿಗಿತ್ತೆಂದರೆ ಅವರು ಟೂರ್ನಿಯಲ್ಲಿ 13 ಪಂದ್ಯಗಳಲ್ಲಿ ಒಂದೇ ಒಂದು ಸಿಕ್ಸರ್ ಕೂಡ ಸಿಡಿಸಲಿಲ್ಲ. ಅವರ ಗರಿಷ್ಠ ರನ್ ಎಂದರೆ 32. ನಂತರದ ಗರಿಷ್ಠ ಮೊತ್ತ 20, 10. ಮ್ಯಾಕ್ಸ್ವೆಲ್ ಇಡೀ ಟೂರ್ನಿಯಲ್ಲಿ 108 ರನ್ ಮಾತ್ರ ಗಳಿಸಿದರು.
ಆ್ಯಂಡ್ರೆ ರಸೆಲ್
12ನೇ ಐಪಿಎಲ್ ಆವೃತ್ತಿಯಲ್ಲಿ ಕೆಕೆಆರ್ ತಂಡವನ್ನು ಏಕಾಂಗಿಯಾಗಿ ಗೆಲ್ಲಿಸಿದ್ದ ರಸೆಲ್ ಈ ವರ್ಷದ ಐಪಿಎಲ್ ಉತ್ತಮವಾಗಿ ಕಾಣಲಿಲ್ಲ. ಕಳೆದ ವರ್ಷ 200+ ಸ್ಟ್ರೈಕ್ ರೇಟ್ನಲ್ಲಿ 510 ರನ್ಗಳಿಸಿದ ಅವರು ಈ ಬಾರಿ ತಂಡದಲ್ಲಿ ಅವಕಾಶವನ್ನೇ ಕಳೆದುಕೊಂಡರು. ಅವರು ಮಂಡಿ ನೋವಿನಿಂದ ತಂಡದಿಂದ ಹೊರಬಿದ್ದ ನಂತರ ಮತ್ತೆ ತಂಡಕ್ಕೆ ಮರಳಲಿಲ್ಲ. ಅವರು ಟೂರ್ನಿಯಲ್ಲಿ 10 ಪಂದ್ಯಗಳಿಂದ 117 ರನ್ ಮತ್ತು 6 ವಿಕೆಟ್ ಪಡೆದಿದ್ದಾರೆ.
ಆ್ಯರೋನ್ ಫಿಂಚ್
ಆರ್ಸಿಬಿ ತಂಡಕ್ಕೆ ಆರಂಭಿಕನಾಗಿ ಭಾರೀ ನಿರೀಕ್ಷೆ ಮೂಡಿಸಿದ್ದ ಆ್ಯರೋನ್ ಫಿಂಚ್ ಕೂಡ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು. ಅವರು 12 ಪಂದ್ಯಗಳಿಂದ 236 ರನ್ ಮಾತ್ರ ಗಳಿಸಿದರು. ಸತತ ವೈಫಲ್ಯಗಳ ನಂತರ ಕೊನೆಯ 3 ಲೀಗ್ ಪಂದ್ಯಗಳಲ್ಲಿ ತಂಡದಿಂದಲೂ ಹೊರಬಿದ್ದರು. ಆಸ್ಟ್ರೇಲಿಯಾ ನಾಯಕನ ಎಂಟ್ರಿಯಿಂದ ತಂಡ ಉತ್ತಮ ಆರಂಭ ಪಡೆಯಬಹುದೆಂಬ ನಿರೀಕ್ಷೆಯನ್ನು ಫಿಂಚಿ ಹುಸಿಗೊಳಿಸಿದರು.
ಪ್ಯಾಟ್ ಕಮ್ಮಿನ್ಸ್
ಬರೋಬ್ಬರಿ 15.5 ಕೋಟಿ ರೂ. ಪಡೆದಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವೇಗಿ ಪ್ಯಾಟ್ ಕಮ್ಮಿನ್ಸ್ ಕೂಡ ನಿರೀಕ್ಷಿಸಿದಷ್ಟು ಪ್ರದರ್ಶನ ನೀಡಲಿಲ್ಲ. ಕೊನೆಯ ಕೆಲವು ಪಂದ್ಯಗಳಲ್ಲಿ ಲಯ ಕಂಡುಕೊಂಡರೂ ಅಷ್ಟರಲ್ಲಿ ಸಮಯ ಮೀರಿ ಹೋಗಿತ್ತು. ಅವರ ತಂಡ ಪ್ಲೇ ಆಫ್ ತಲುಪುವಲ್ಲಿ ವಿಫಲವಾಯಿತು. ಕಮ್ಮಿನ್ಸ್ ಟೂರ್ನಿಯಲ್ಲಿ ಕೇವಲ 12 ವಿಕೆಟ್ ಪಡೆದರು. ಅದರಲ್ಲಿ ಹೆಚ್ಚು ವಿಕೆಟ್ ಕೊನೆಯ ಮೂರು ಪಂದ್ಯಗಳಲ್ಲಿ ಬಂದಿವೆ.