ದುಬೈ: ಫುಡ್ ಪಾಯ್ಸನ್ನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಯೂನಿವರ್ಸಲ್ ಬಾಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆರಂಭಿಕ ಬ್ಯಾಟ್ಸಮನ್ ಕ್ರಿಸ್ ಗೇಲ್ ನಾಳೆ ಕಣಕ್ಕಿಳಿಯಲಿದ್ದು, ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಆರ್ಭಟಿಸುವ ಸಾಧ್ಯತೆ ಇದೆ.
ಪಂಜಾಬ್ ತಂಡ ಆಡಿರುವ ಏಳು ಪಂದ್ಯಗಳ ಪೈಕಿ ಕೇವಲ 1ರಲ್ಲಿ ಮಾತ್ರ ಗೆಲುವು ಸಾಧಿಸಿ, ಸದ್ಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಪ್ಲೇ - ಆಫ್ ಕನಸು ಜೀವಂತವಾಗಿರಿಸಿಕೊಳ್ಳಬೇಕಾದರೆ ಮುಂದಿನ ಎಲ್ಲ ಪಂದ್ಯಗಳಲ್ಲೂ ಗೆಲುವು ಸಾಧಿಸುವ ಅನಿವಾರ್ಯತೆ ನಿರ್ಮಾಣಗೊಂಡಿದೆ. ಹೀಗಾಗಿ ಸ್ಫೋಟಕ ಬ್ಯಾಟ್ಸ್ಮನ್ ಗೇಲ್ ನಾಳೆಯ ಪಂದ್ಯದಲ್ಲಿ ಆರ್ಭಟಿಸಿದಾಗ ಮಾತ್ರ ಅದು ಸಾಧ್ಯವಾಗಲಿದೆ.
ನಾಳೆ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಆರ್ಸಿಬಿ ಹಾಗೂ ಪಂಜಾಬ್ ತಂಡಗಳು ಸೆಣಸಾಟ ನಡೆಸಲಿದ್ದು, ಉಭಯ ತಂಡಗಳಿಗೆ ಪಂದ್ಯ ಮಹತ್ವದಾಗಿದೆ. ಕ್ರಿಸ್ ಗೇಲ್ ಮೈದಾನಕ್ಕಿಳಿಯುತ್ತಿರುವ ಸುದ್ದಿಯನ್ನ ಖುದ್ದಾಗಿ ಪಂಜಾಬ್ ತನ್ನ ಇನ್ಸ್ಟಾಗ್ರಾಂ ಪೇಜ್ನಲ್ಲಿ ಶೇರ್ ಮಾಡಿದೆ. 'ದಿ ಯೂನಿವರ್ಸಲ್ ಬಾಸ್ ಈಸ್ ಬ್ಯಾಕ್' ಕಳೆದ ಅನೇಕ ದಿನಗಳಿಂದ ನೀವು ಕಾಯುತ್ತಿದ್ದ ಸಮಯ ಮುಗಿಯಲು ಬಂದಿದೆ ಎಂದು ಬರೆದುಕೊಂಡಿದೆ. ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕ್ರಿಸ್ ಗೇಲ್ಗೆ ಇದು ಈ ಆವೃತ್ತಿಯ ಮೊದಲ ಪಂದ್ಯವಾಗಲಿದೆ.