ಮುಂಬೈ: ಟೀಂ ಇಂಡಿಯಾ ನೂತನ ಕೋಚ್ ಹುದ್ದೆಗಾಗಿ ಇಂದು ಸಂದರ್ಶನ ನಡೆಯುತ್ತಿದ್ದು, ಆಯ್ಕೆಯಾಗುವ ಕೋಚ್ ಸಮಯಾವಧಿ 2021ರ ಐಸಿಸಿ ಟಿ-20 ವಿಶ್ವಕಪ್ವರೆಗೂ ಮಾತ್ರ ಎಂಬ ಮಾಹಿತಿ ಇದೀಗ ತಿಳಿದು ಬಂದಿದೆ.
ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ಸಂದರ್ಶನ ನಡೆಸುತ್ತಿದ್ದು, ಕೋಚ್ ಹುದ್ದೆಗಾಗಿ ಫೈನಲ್ ಆಗಿರುವ ಆರು ಅಭ್ಯರ್ಥಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ನ್ಯೂಜಿಲ್ಯಾಂಡ್ನ ಮಾಜಿ ಕೋಚ್ ಮೈಕ್ ಹಸ್ಸನ್, ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಹಾಗೂ ಶ್ರೀಲಂಕಾ ಕೋಚ್ ಟಾಮ್ ಮೂಡಿ,ಅಫ್ಘಾನಿಸ್ತಾನದ ಕೋಚ್ ಸಿಮನ್ಸ್, ಟೀಂ ಇಂಡಿಯಾ ಮಾಜಿ ಮ್ಯಾನೇಜರ್ ಲಾಲ್ಚಂದ್ ರಜಪೂತ್, ರಾಬಿನ್ ಸಿಂಗ್, ಹಾಲಿ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಅವರ ಹೆಸರುಗಳನ್ನು ಫೈನಲ್ ಆಗಿವೆ.
ಈಗಾಗಲೇ ತಂಡದ ಕೋಚ್ ಆಗಿರುವ ರವಿಶಾಸ್ತ್ರಿ ಅವರ ಕಾಲಾವಧಿಯನ್ನ 45 ದಿನಗಳ ಕಾಲ ವಿಸ್ತರಣೆ ಮಾಡಲಾಗಿದ್ದು, ಇನ್ನೊಂದು ಅವಧಿಗೂ ಅವರೇ ತಂಡದ ಕೋಚ್ ಆಗಿ ಮುಂದುವರಿಯಲಿದ್ದಾರೆ ಎಂಬ ಮಾತು ಸಹ ಗಂಭೀರವಾಗಿ ಕೇಳಿ ಬರುತ್ತಿವೆ. ಇಂದು ಸಂಜೆ 7ಗಂಟೆಗೆ ಟೀಂ ಇಂಡಿಯಾ ಕೋಚ್ ಯಾರು ಅಲಂಕಾರ ಮಾಡಲಿದ್ದಾರೆ ಎಂಬುದರ ಕುರಿತು ಫೈನಲ್ ರಿಸಲ್ಟ್ ಸಹ ಹೊರ ಬೀಳುವ ಸಾಧ್ಯತೆ ಇದೆ.
ಸದ್ಯ ವೆಸ್ಟ್ ಇಂಡೀಸ್ ನಾಡಲಿ ಕ್ರಿಕೆಟ್ ಸರಣಿಯಲ್ಲಿರುವ ಟೀಂ ಇಂಡಿಯಾಗೆ ರವಿಶಾಸ್ತ್ರಿ ಕೋಚ್ ಆಗಿದ್ದು, ಈ ಸರಣಿ ಮುಕ್ತಾಯಗೊಳ್ಳುತ್ತಿದ್ದಂತೆ ಅವರ ಅವಧಿ ಕೊನೆಯಾಗಲಿದೆ.