ಮೆಲ್ಬೋರ್ನ್: ಟೆಸ್ಟ್ ಸರಣಿಗಾಗಿ ಡಿಸೆಂಬರ್ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವ ಭಾರತ ತಂಡ ಕೊರೊನಾ ವೈರಸ್ ಕಾರಣದಿಂದಾಗಿ ಸರಣಿ ಆರಂಭಕ್ಕೂ ಎರಡು ವಾರಗಳ ಮುನ್ನ ಕ್ವಾರಂಟೈನ್‌ಗೆ ಒಳಗಾಗಬೇಕಾದ ಸಾಧ್ಯತೆಯಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಸಿಇಒ ನಿಕ್ ಹ್ಯಾಕ್ಲೆ ಹೇಳಿದ್ದಾರೆ.
ಪ್ರಸ್ತುತ ಸನ್ನಿವೇಶದಲ್ಲಿ ಅಡಿಲೇಡ್, ಓವಲ್ ಮತ್ತು ಅದರ ಹೊಸದಾಗಿ ನಿರ್ಮಿಸಲಾದ ಹೋಟೆಲ್ ಅನ್ನು ಬಯೋಸೆಕ್ಯೂರ್ ಬಬಲ್ ಎಂದು ಖಚಿತಪಡಿಸಲಾಗಿದೆ. ಸರಣಿ ಆರಂಭಕ್ಕೂ ಮುನ್ನ ಅಡಿಲೇಡ್ ಓವಲ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡ ಕ್ವಾರಂಟೈನ್‌ಗೆ ಒಳಗಾಗುವಂತೆ ಕೋರಲಾಗುವುದು ಎಂದು ಅವರು ಹೇಳಿದ್ದಾರೆ.
ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಡಿಸೆಂಬರ್ 4 ರಿಂದ ಬ್ರಿಸ್ಬೇನ್ನಲ್ಲಿ ಮೊದಲ ಟೆಸ್ಟ್ ಪಂದ್ಯವನ್ನಾಡಲಿದೆ.
ಎರಡು ವಾರಗಳ ಕ್ವಾರಂಟೈನ್ ಸಾಕಷ್ಟು ವ್ಯವಸ್ಥಿತವಾಗಿದೆ. ಈ ವೇಳೆ ಅವರಿಗೆ ಉತ್ತಮ ವಾತಾವರಣ ನಿರ್ಮಿಸಿಕೊಡುವುದಾಗಿ ನಾವು ಭರವಸೆ ನೀಡಲಿದ್ದೇವೆ. ತರಬೇತಿಗೆ ಬೇಕಾದ ಎಲ್ಲಾ ಸೌಲಭ್ಯಗಳು ಅವರಿಗೆ ಸಿಗುವುದರಿಂದ ಅವರಿಗೆ ಪಂದ್ಯಕ್ಕೆ ಸಿದ್ದವಾಗಲು ಉತ್ತಮ ವಾತಾವರಣ ಸಿಗಲಿದೆ ಎಂದು ಹ್ಯಾಕ್ಲೆ ಹೇಳಿದ್ದಾರೆ.
ಅಡಿಲೇಡ್ ಸ್ಟೇಡಿಯಂ ಹೋಟೆಲ್ ವ್ಯವಸ್ಥೆಯನ್ನು ಕೂಡ ಹೊಂದಿದೆ. ಅಲ್ಲಿ ಓಲ್ಡ್ ಟ್ರಾಫರ್ಡ್ ಹಾಗೂ ಏಜಸ್ ಬೌಲ್‌ನಂತೆಯೇ ಕ್ರೀಡಾಂಗಣಕ್ಕೆ ಈ ಹೋಟೆಲ್ ಹೊಂದಿಕೊಂಡಂತಿರುವುದರಿಂದ ಎಲ್ಲಾ ರೀತಿಯ ಅನುಕೂಲ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.
ಉಪಖಂಡದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಭಾರತದ ವಿರುದ್ಧ ಸರಣಿಗೂ ಮುನ್ನ ಕೋವಿಡ್ ಟೆಸ್ಟ್ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.