ಜಮೈಕಾ: ಕೆರಿಬಿಯನ್ ನಾಡಿಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದೆ. ಈಗಾಗಲೇ ಟಿ-20 ಹಾಗೂ ಏಕದಿನ ಕ್ರಿಕೆಟ್ ಸರಣಿ ಕೈವಶ ಮಾಡಿಕೊಂಡಿದ್ದ ತಂಡ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ನ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲು ಮಾಡುವ ಮೂಲಕ ಕ್ಲೀನ್ ಸ್ವೀಪ್ ಮಾಡಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಬರೋಬ್ಬರಿ 318 ರನ್ ಅಂತರದ ಗೆಲುವು ದಾಖಲು ಮಾಡಿದ್ದ ಟೀಂ ಇಂಡಿಯಾ ಇದೀಗ 2ನೇ ಟೆಸ್ಟ್ ಪಂದ್ಯದಲ್ಲೂ ಬರೋಬ್ಬರಿ 257ರನ್‌ಗಳ ಗೆಲುವು ದಾಖಲು ಮಾಡಿದೆ. ಈ ಮೂಲಕ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿ ದಾಖಲೆ ಬರೆದಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಹನುಮ ವಿಹಾರಿ ಶತಕ (111) ವಿರಾಟ್ ಕೊಹ್ಲಿ (76) ಇಶಾಂತ್ ಶರ್ಮಾ (57) ಹಾಗೂ ಮಯಾಂಕ್ ಅಗರ್ವಾಲ್ (55) ಅರ್ಧಶತಕಗಳ ನೆರವಿನಿಂದ 416 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಬಳಿಕ ಹ್ಯಾಟ್ರಿಕ್ ಸೇರಿದಂತೆ ಮೊದಲ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್ ಸಾಧನೆ ಮಾಡಿದ ಜಸ್ಪ್ರೀತ್ ಬುಮ್ರಾ ಮಾರಕ ದಾಳಿಗೆ ಸಿಲುಕಿದ ವಿಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 117 ರನ್‌ಗಳಿಗೆ ಸರ್ವಪತನವನ್ನು ಕಂಡಿತು.
ಇದಾದ ಪಾಲೋಆನ್ ಹೇರದೇ 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ್ದ ಇಂಡಿಯಾ ರಹಾನೆ ಅಜೇಯ (64)ರನ್ ಹಾಗೂ ವಿಹಾರಿ ಅಜೇಯ(53)ರನ್‌ಗಳ ನೆರವಿನಿಂದ 4ವಿಕೆಟ್ನಷ್ಟಕ್ಕೆ 168ರನ್ಗಳಿಕೆ ಮಾಡಿ ಡಿಕ್ಲೇರ್ ಮಾಡಿಕೊಳ್ಳುವ ಮೂಲಕ ವೆಸ್ಟ್ ಇಂಡೀಸ್ ತಂಡಕ್ಕೆ 468 ರನ್‌ಗಳ ಬೃಹತ್ ಗೆಲುವಿನ ಗುರಿಯನ್ನು ಒಡ್ಡಿತು.
ಇದರ ಬೆನ್ನತ್ತಿದ್ದ ಕೆರಿಬಿಯನ್ ನಿನ್ನೆ 45ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತ್ತು. ಇವತ್ತು ಆರಂಭದಲ್ಲೇ ಅಘಾತ ಅನುಭವಿಸಿದ ತಂಡ ಡ್ಯಾರೆನ್ ಬ್ರಾವೋ(23ರನ್) ವಿಕೆಟ್ ಕಳೆದುಕೊಂಡಿತ್ತು. ಇದಾದ ಬಳಿಕ ರೋಸ್ಟನ್ ಚೇಸ್ (12) ವಿಕೆಟ್ ಪಡೆದುಕೊಳ್ಳುವಲ್ಲಿ ಜಡೇಜಾ ಯಶಸ್ವಿಯಾದರು. ಇದರ ಬೆನ್ನಲ್ಲೇ ಶಿಮ್ರಾ ಹೆಟ್ಮಾಯೆರ್ (1) ಓಟಕ್ಕೆ ಇಶಾಂತ್ ಶರ್ಮಾ ಬ್ರೇಕ್ ಹಾಕಿದರು.
ಶಮರ್ ಬ್ರೂಕ್ಸ್ (50) ಹಾಗೂ ಜರ್ಮೈನ್ ಬ್ಲ್ಯಾಕ್‌ವುಡ್ (38) ಟೀಂ ಇಂಡಿಯಾ ಬೌಲರ್ಗಳಿಗೆ ಸ್ವಲ್ಪ ಪ್ರತಿರೋಧ ಒಡ್ಡಿದರು. ಆದರೆ ಬ್ರೂಕ್ಸ್ನ್ನ ಕೊಹ್ಲಿ ರನೌಟ್ ಮಾಡಿದ್ರೆ, ಬ್ಲ್ಯಾಕ್‌ವುಡ್(38) ವಿಕೆಟ್ ಪಡೆದುಕೊಳ್ಳುವಲ್ಲಿ ಬುಮ್ರಾ ಯಶಸ್ವಿಯಾದರು. ಇದಾದ ಬಳಿಕ ಹ್ಯಾಮಿಲ್ಟನ್(0),ಕಾರ್ನವಾಲ್(1) ಸಹ ವಿಕೆಟ್ ಒಪ್ಪಿಸಿದರು. ಈ ವೇಳೆಗೆ ತಂಡದ ಸ್ಕೋರ್ 8ವಿಕೆಟ್ನಷ್ಟಕ್ಕೆ 206ರನ್.
ಇದಾದ ಬಳಿಕ ಕ್ಯಾಪ್ಟನ್ ಹೋಲ್ಡರ್(39) ವಿಕೆಟ್ ಜಡೇಜಾ, ರೂಚ್ ವಿಕೆಟ್ ಶಮಿ ಪಡೆದುಕೊಂಡು ವೆಸ್ಟ್ ಇಂಡೀಸ್ ಪಡೆಯನ್ನ 210ರನ್‌ಗಳಿಗೆ ಆಲೌಟ್ ಮಾಡಿದ್ದರಿಂದ ಟೀಂ ಇಂಡಿಯಾ ಎರಡನೇ ಟೆಸ್ಟ್ ಪಂದ್ಯದಲ್ಲೂ ಬರೋಬ್ಬರಿ 257ರನ್‌ಗಳ ಗೆಲುವು ದಾಖಲು ಮಾಡಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಪರ ಇಶಾಂತ್ 2ವಿಕೆಟ್, ಶಮ್ಮಿ, ಜಡೇಜಾ ತಲಾ 3ವಿಕೆಟ್ ಪಡೆದುಕೊಂಡರೆ ಬುಮ್ರಾ 1ವಿಕೆಟ್ ಪಡೆದರು. 2ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಸಿಡಿಸಿದ ಹನುಮ ವಿಹಾರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಲಾಯಿತು.