ಧರ್ಮಶಾಲಾ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಾಳೆ ಹಿಮಾಚಲ ಪ್ರದೇಶ ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊದಲ ಟಿ-20 ಪಂದ್ಯ ನಡೆಯಲಿದ್ದು, ಅದಕ್ಕಾಗಿ ಉಭಯ ತಂಡಗಳು ಸಖತ್ ತಯಾರಿ ನಡೆಸಿವೆ.
ಈಗಾಗಲೇ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟಿ-20 ಪಂದ್ಯದಲ್ಲಿ ಕೊಹ್ಲಿ ಪಡೆ ಗೆಲುವಿನ ನಗೆ ಬೀರಿದ್ದು, ಅದೇ ಉತ್ಸಾಹದೊಂದಿಗೆ ಕಣಕ್ಕಿಳಿಯಲಿದೆ. ಮುಂಬರುವ ಟಿ-20 ವಿಶ್ವಕಪ್ ಟೂರ್ನಿಯಿಂದ ಟೀಂ ಇಂಡಿಯಾಗೆ ಈ ಸರಣಿ ಬಹಳಷ್ಟು ಮಹತ್ವ ಪಡೆದುಕೊಂಡಿದ್ದು, ಪ್ರತಿಯೊಂದು ಪಂದ್ಯದಲ್ಲೂ ಗೆಲ್ಲುವ ಇರಾದೆ ಹೊಂದಿದೆ. ಮುಖ್ಯವಾಗಿ ನಾಳೆಯ ಪಂದ್ಯದಲ್ಲಿ ಈ ಕೆಳಗಿನ ಪ್ಲೇಯರ್ಸ್ ಆಡುವ ಸಾಧ್ಯತೆ ದಟ್ಟವಾಗಿದೆ.
ಸಂಭವನೀಯ ಪ್ಲೇಯರ್ಸ್: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕೃನಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ದೀಪಕ್ ಚಹರ್ ಹಾಗೂ ನವದೀಪ್ ಸೈನಿ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಇದೆ. ಮುಖ್ಯವಾಗಿ ಯುವ ಸ್ಪಿನ್ನರ್ ಹಾಗೂ ವೇಗದ ಬೌಲರ್ಗಳಿಗೆ ಮಣೆ ಹಾಕುವುದು ಬಹುತೇಕ ಖಚಿತವಾಗಿದೆ.
ಹೊಸ ಜರ್ಸಿ!
ನಾಳೆ ಧರ್ಮಶಾಲದಲ್ಲಿ ನಡೆಯಲಿರುವ ಮೊದಲ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಹೊಸ ಜರ್ಸಿ ಹಾಕಿಕೊಂಡು ಮೈದಾನಕ್ಕಿಳಿಯಲಿದೆ. ಇಷ್ಟುದಿನ ಟೀಂ ಇಂಡಿಯಾ ಹಾಕಿಕೊಳ್ಳುವ ಜೆರ್ಸಿಯಲ್ಲಿ ಚೀನಾ ಮೂಲದ ಮೊಬೈಲ್ ತಯಾರಕ ಸಂಸ್ಥೆ ಒಪ್ಪೋ ಬ್ರ್ಯಾಂಡ್ ಇತ್ತು.
ಆದರೆ, ಇದೀಗ ಕೇರಳ ಮೂಲದ ಬೈಜು ರವೀಂದ್ರನ್ ಒಡೆತನದ ಬೈಜೂಸ್ ಆಗಿ ಬದಲಾಗಲಿದೆ. 2017 ಮಾರ್ಚ್ ತಿಂಗಳಲ್ಲಿ 5 ವರ್ಷಗಳ ಅವಧಿಗೆ ಬರೋಬ್ಬರಿ 1079 ಕೋಟಿ ರೂಪಾಯಿಗಳಿಗೆ ಒಪ್ಪೋ ಬಿಡ್ ಗೆದ್ದಿತ್ತು. ಆದರೆ, ಒಪ್ಪೋ ತನ್ನ ಬಿಡ್ ಹಕ್ಕನ್ನು ಬೆಂಗಳೂರು ತಳಹದಿಯ ಶೈಕ್ಷಣಿಕ ತಂತ್ರಜ್ಞಾನ ಒನ್ಲೈನ್ ಟೂರಿಂಗ್ ಸಂಸ್ಥೆಯಾದ ಬೈಜೂಸ್‌ಗೆ ಹಸ್ತಾಂತರಿಸಿದೆ. ಹೀಗಾಗಿ ನಾಳೆ ಟೀಂ ಇಂಡಿಯಾ ಹಾಕಿಕೊಳ್ಳುವ ಜರ್ಸಿಯಲ್ಲಿ ಬೈಜೂಸ್ ಕಾಣಲಿದೆ.