ದುಬೈ : ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಕ್ವಾರಂಟೈನ್ ಅವಧಿಯನ್ನು ಸಡಿಲಿಸಲಾಗದಿದ್ದರೂ ಆಸ್ಟ್ರೇಲಿಯಾದಲ್ಲಿ ತರಬೇತಿ ಪ್ರಾರಂಭಿಸಲು ಭಾರತೀಯ ತಂಡಕ್ಕೆ ಅವಕಾಶ ನೀಡಬಹುದೇ ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆದಿವೆ.
ವಿರಾಟ್ ಕೊಹ್ಲಿ ನೇತೃತ್ವದ ತಂಡಕ್ಕೆ ಒಳ್ಳೆಯ ಸುದ್ದಿಯೇನೆಂದ್ರೆ, ಆಸ್ಟ್ರೇಲಿಯಾವನ್ನು ತಲುಪಿದ ನಂತರದ ದಿನದಿಂದಲೇ ತರಬೇತಿ ನಡೆಸಲು ಮೈದಾನಕ್ಕೆ ಇಳಿಬಹುದಾಗಿದೆ. ನವೆಂಬರ್ 12ರಂದು ಟೀಂ ಇಂಡಿಯಾ ಆಟಗಾರರು ಆಸ್ಟ್ರೇಲಿಯಾಕ್ಕೆ ತೆರಳಲಿದ್ದು, ಕೊರೊನಾ ಪರೀಕ್ಷೆಗೆ ಒಳಗಾಗುತ್ತಾರೆ. ವರದಿ ನೆಗೆಟಿವ್ ಬಂದರೆ ಆಟಗಾರರು ತರಬೇತಿ ಪ್ರಾರಂಭಿಸಬಹುದು ಎಂದು ಮೂಲಗಳು ತಿಳಿಸಿವೆ.
"ಆಟಗಾರರು ನವೆಂಬರ್ 12ರ ಬೆಳಗ್ಗೆ ಆಸ್ಟ್ರೇಲಿಯಾವನ್ನು ತಲುಪಲಿದ್ದು, ಅಂದೇ ಕೋವಿಡ್ ಟೆಸ್ಟ್ಗೆ ಒಳಗಾಗಲಿದ್ದಾರೆ. ವರದಿ ನೆಗೆಟಿವ್ ಎಂದು ಬಂದರೆ ಅದೇ ಕ್ಷಣ, ಅವರು ತರಬೇತಿ ಪಡೆಯಲು ಅರ್ಹರಾಗಿರುತ್ತಾರೆ. ಆದ್ದರಿಂದ ನವೆಂಬರ್ 13ರಿಂದ ತರಬೇತಿಯನ್ನು ಪ್ರಾರಂಭಿಸಬಹುದು" ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಹಲವು ಆಟಗಾರರು ದುಬೈನ ಐಸಿಸಿ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಆಸೀಸ್ ವಿರುದ್ಧದ ಅಹರ್ನಿಶಿ ಟೆಸ್ಟ್ ಪಂದ್ಯದ ಮೇಲೆ ಕಣ್ಣಿಟ್ಟಿರುವ ಟೀಂ ಇಂಡಿಯಾ ಆಟಗಾರರು ಪಿಂಕ್ ಬಾಲ್ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.