ಸಿಡ್ನಿ: ಆಸ್ಟ್ರೇಲಿಯಾದ ಬ್ಯಾಟಿಂಗ್ ಆಧಾರ ಸ್ತಂಭವಾಗಿರುವ ಸ್ಟೀವ್ ಸ್ಮಿತ್ ಕಳೆದೆರಡು ಪಂದ್ಯಗಳಲ್ಲಿ ತಮ್ಮ ವಿರುದ್ಧ ಪ್ರಾಬಲ್ಯ ಸಾಧಿಸಿರುವ ಭಾರತ ತಂಡದ ಅನುಭವಿ ಸ್ಪಿನ್ನರ್ ಅಶ್ವಿನ್ ಅವರನ್ನು ಈ ಪಂದ್ಯದಲ್ಲಿ ಒತ್ತಡಕ್ಕೊಳಗಾಗುವಂತೆ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಗುರುವಾರ ತಿಳಿಸಿದ್ದಾರೆ.
ತಮ್ಮ ಕಳಪೆ ಫಾರ್ಮ್ನಿಂದ ಹೊರಬಂದಿರುವ ಸ್ಮಿತ್ ಮೂರನೇ ಟೆಸ್ಟ್ನ ಆರಂಭದ ದಿನ ಅದ್ಭುತ ಹೊಡೆತಗಳ ಮೂಲಕ ಅಜೇಯ 31 ರನ್ ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ಅವರು 3ನೇ ವಿಕೆಟ್ಗೆ ಲಾಬುಶೇನ್ ಜೊತೆಗೆ 60 ರನ್ಗಳ ಜೊತೆಯಾಟ ನಡೆಸಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯಾ ತಂಡ ಮೊದಲ ದಿನ 2 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿದೆ. ಲಾಬುಶೇನ್ 67 ರನ್ ಗಳಿಸಿ ಸ್ಮಿತ್ ಜೊತೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.
"ನಾನು ಉತ್ತಮವಾಗಿ ಆಡುತ್ತಿದ್ದು, ಮೈದಾನದಲ್ಲಿ ಸ್ವಲ್ಪ ಸಮಯ ಕಳೆದಿರುವುದಕ್ಕೆ ಹಾಗೂ ಮಾರ್ನಸ್ ಸಹಭಾಗಿತ್ವದಲ್ಲಿ ಆಡುತ್ತಿರುವುದು ಸಂತೋಷ ತಂದಿದೆ. ನಾನು ಈ ಹಿಂದಿನ ಪಂದ್ಯಗಳಲ್ಲಿ ಅಶ್ವಿನ್ರ ವಿರುದ್ಧ ಉತ್ತಮವಾಗಿ ಆಡಿಲ್ಲ. ಆದರೆ ಈ ಪಂದ್ಯದಲ್ಲಿ ಅವರ ಮೇಲೆ ಸ್ವಲ್ಪಮಟ್ಟಿಗಾದರೂ ಒತ್ತಡ ಹೇರಲು ಬಯಸಿದ್ದೇನೆ" ಎಂದು ದಿನದಾಟದಂತ್ಯದಲ್ಲಿ ಸ್ಮಿತ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ನಾನು ಸ್ವಲ್ಪಮಟ್ಟಿನ ಹಿಡಿತ ಸಾಧಿಸಲು ಪ್ರಯತ್ನಿಸಿದ್ದೇನೆ. ಸರಣಿಯಲ್ಲಿ ನಾನು ಕಷ್ಟಪಡುತ್ತಿದ್ದೇನೆ. ಹಾಗಾಗಿ ಇಂದು ಮೈದಾನಕ್ಕೆ ಬಂದೊಡನೆ ಒಂದೆರಡು ಬೌಂಡರಿಗಳನ್ನು ಪಡೆದು ಉತ್ತಮ ಲಯ ಕಂಡುಕೊಂಡಿದ್ದೇನೆ. ಮಾರ್ನಸ್ ಚೆನ್ನಾಗಿ ಆಡುತ್ತಿದ್ದಾರೆ. ಆಶಾದಾಯಕವಾಗಿ ನಾಳೆ ಕೂಡ ಉತ್ತಮವಾಗಿ ಮುಂದುವರಿಯುವ ಭರವಸೆಯಿದೆ ಎಂದು ಸ್ಮಿತ್ ಹೇಳಿದ್ದಾರೆ.
ಇದನ್ನು ಓದಿ:ಪುಕೋವ್ಸ್ಕಿ, ಲಾಬುಶೇನ್ ಅರ್ಧಶತಕ: ಮೊದಲ ದಿನದಾಂತ್ಯಕ್ಕೆ ಆಸೀಸ್ ಮೇಲುಗೈ