ದುಬೈ: ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ನಂತರ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಟೀಂ ಇಂಡಿಯಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕ್ರಮವಾಗಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಇಂಗ್ಲೆಂಡ್ ಓಪನರ್ ಜಾನಿ ಬೈರ್ಸ್ಟೋವ್ ಅಗ್ರ 10ರೊಳಗೆ ಪ್ರವೇಶಿಸಿದ್ದಾರೆ.
ವಿರಾಟ್ ಕೊಹ್ಲಿ 971, ರೋಹಿತ್ ಶರ್ಮಾ 855 ತಮ್ಮ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳಿಂದ ಒಂದು ಶತಕ(112)ದ ಜೊತೆಗೆ 196 ರನ್ಗಳಿಸಿದ ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಜಾನಿ ಬೈರ್ಸ್ಟೋವ್ 3 ಸ್ಥಾನ ಏರಿಕೆ ಕಂಡು 10ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. 2018ರಲ್ಲಿ 9ನೇ ರ‍್ಯಾಂಕ್ ಪಡೆದಿದ್ದು ಅವರು ವೃತ್ತಿ ಜೀವನದ ಶ್ರೇಷ್ಠ ಸಾಧನೆಯಾಗಿತ್ತು.
ಇನ್ನು ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ವೆಲ್ 5 ಸ್ಥಾನ ಬಡ್ತಿ ಪಡೆದು 26ನೇ ಹಾಗೂ ಅಲೆಕ್ಸ್ ಕ್ಯಾರಿ 11 ಸ್ಥಾನ ಬಡ್ತಿ ಪಡೆದು 28ನೇ ಸ್ಥಾನಕ್ಕೇರಿದ್ದಾರೆ.
ಇಂಗ್ಲೆಂಡ್ ಆಲ್ರೌಂಡರ್ ಕ್ರಿಸ್ ವೋಕ್ಸ್ ಬೌಲಿಂಗ್ ಶ್ರೇಯಾಂಕದಲ್ಲಿ 3 ಸ್ಥಾನ ಏರಿಕೆ ಕಂಡು ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ 4ನೇ ಸ್ಥಾನ ಪಡೆದಿದ್ದಾರೆ. ನ್ಯೂಜಿಲ್ಯಾಂಡ್ನ ಟ್ರೆಂಟ್ ಬೌಲ್ಟ್ ಹಾಗೂ ಭಾರತದ ಜಸ್ಪ್ರೀತ್ ಬುಮ್ರಾ ಮೊದಲ ಎರಡು ಸ್ಥಾನ ಉಳಿಸಿಕೊಂಡಿದ್ದಾರೆ. ಆಲ್ರೌಂಡರ್ ವಿಭಾಗದಲ್ಲೂ 20 ಅಂಕ ಪಡೆಯುವ ಮೂಲಕ 2ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಮೊದಲ ಸ್ಥಾನದಲ್ಲಿ ಅಫ್ಘಾನಿಸ್ಥಾನದ ಮೊಹಮ್ಮದ್ ನಬಿ ಇದ್ದಾರೆ.
ಆಸ್ಟ್ರೇಲಿಯಾದ ಜೋಶ್ ಹೇಜಲ್ವುಡ್(8) 2 ವರ್ಷಗಳ ನಂತರ ಟಾಪ್ 10ಕ್ಕೆ ಮರಳಿದ್ದಾರೆ. ಜೋಫ್ರಾ ಆರ್ಚರ್ ಕೂಡ 18 ಸ್ಥಾನ ಏರಿಕೆ ಕಂಡು 10ನೇ ಶ್ರೇಯಾಂಕಕ್ಕೆ ಬಡ್ತಿ ಪಡೆದಿದ್ದಾರೆ.