ಮೆಲ್ಬೋರ್ನ್: ಮಹಿಳಾ ಸಮಾನತೆ ಹಾಗೂ ಮಹಿಳಾ ಕ್ರಿಕೆಟ್ ಉತ್ತೇಜಿಸುವ ದೃಷ್ಠಿಯಿಂದ ಐಸಿಸಿ 2020ರ ಟಿ20 ವಿಶ್ವಕಪ್ ಬಹುಮಾನ ಮೊತ್ತವನ್ನು 2018 ರಲ್ಲಿ ನೀಡಿದ್ದ ಮೊತ್ತಕ್ಕಿಂತ ಶೇ. 320 ರಷ್ಟನ್ನು ಏರಿಸಿದೆ.
ಆಸ್ಟ್ರೇಲಿಯಾದಲ್ಲಿ 2020ಕ್ಕೆ ನಡೆಯುವ ಮಹಿಳಾ ಟಿ-20 ವಿಶ್ವಕಪ್ನಲ್ಲಿ ಚಾಂಪಿಯನ್ ತಂಡಕ್ಕೆ 10 ಲಕ್ಷ ಅಮೆರಿಕನ್ ಡಾಲರ್(7.1ಕೋಟಿ) ಬಹುಮಾನ ದೊರೆಯಲಿದೆ. ರನ್ನರ್ ಅಪ್ ಆಗುವ ತಂಡ 5 ಲಕ್ಷ ಅಮೆರಿಕನ್ ಡಾಲರ್(3.57 ಕೋಟಿ) ಮೊತ್ತವನ್ನು ಪಡೆಯಲಿದೆ.
ಈ ಟೂರ್ನಿ ಆಸ್ಟ್ರೇಲಿಯಾದಲ್ಲಿ ಆಯೋಜನೆಯಾಗುವುದರಿಂದ ಒಂದುವೇಳೆ ಆಸ್ಟ್ರೇಲಿಯ ಚಾಂಪಿಯನ್ ಆದರೆ 6 ಲಕ್ಷ ಅಮೆರಿಕನ್ ಡಾಲರ್(4.29 ಕೋಟಿ) ಮೊತ್ತ ಸಿಗಲಿದೆ. 2021 ರ ಏಕದಿನ ವಿಶ್ವಕಪ್ ಬಹುಮಾನ ಒಟ್ಟು ಮೊತ್ತವನ್ನು ಕೂಡ 20(2017) ಲಕ್ಷ ಡಾಲರ್ನಿಂದ 35 ಲಕ್ಷ ಡಾಲರ್ಗೆ ಏರಿಕೆ ಮಾಡಲಾಗಿದೆ.
ಇದೇ ರೀತಿ ಪುರುಷರ ಐಸಿಸಿ ಟಿ-20 ವಿಶ್ವಕಪ್ ಚಾಂಪಿಯನ್ ತಂಡ 16 ಲಕ್ಷ ಅಮೆರಿಕನ್ ಡಾಲರ್(11.44 ಕೋಟಿ) ಮೊತ್ತವನ್ನು ಪಡೆಯಲಿದೆ.
ಈ ಬಗ್ಗೆ ಮಾತನಾಡಿರುವ ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಮನು ಸಾಹ್ನಿ ಅವರು, ಮಹಿಳೆಯರ ಕ್ರಿಕೆಟ್ಗೆ ಪ್ರೋತ್ಸಾಹ ನೀಡುವುದಕ್ಕೆ ಐಸಿಸಿ ಬದ್ಧವಾಗಿದ್ದು, ಈ ಹಿಂದೆ ನಿರ್ಧಾರ ತೆಗೆದುಕೊಂಡಂತೆ ಐಸಿಸಿ ಕ್ರಮ ಕೈಗೊಳ್ಳುತ್ತಿದೆ ಎಂದರು.
ಇದರ ಜೊತೆಗೆ ಅಂಡರ್ 19 ಪುರುಷರ ಕ್ರಿಕೆಟ್ ವಿಶ್ವಕಪ್ನಂತೆ ಮಹಿಳೆಯರ ಅಂಡರ್ 19 ವಿಶ್ವಕಪ್ ಅನ್ನು 2021 ರಲ್ಲಿ ಬಾಂಗ್ಲಾದೇಶದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.