ಕೊಚ್ಚಿ: ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪ ಹೊತ್ತು ತದನಂತರ ಅದರಿಂದ ಮುಕ್ತರಾಗಿರುವ ಟೀಂ ಇಂಡಿಯಾ ಮಾಜಿ ವೇಗದ ಬೌಲರ್ ಎಸ್ ಶ್ರೀಶಾಂತ್ ಇದೀಗ ನಿಜವಾದ ಗಾಡ್ ಆಫ್ ಕ್ರಿಕೆಟ್ ಯಾರು ಎಂಬ ಹೆಸರು ಬಹಿರಂಗ ಪಡಿದ್ದಾರೆ.
2011ರಲ್ಲಿ ಟೀಂ ಇಂಡಿಯಾ ಪರ ಕೊನೆ ಟೆಸ್ಟ್ ಪಂದ್ಯವನ್ನಾಡಿದ್ದ ಈ ಪ್ಲೇಯರ್ ಇದೀಗ ಮಾತನಾಡಿದ್ದು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನ ಹಾಡಿ ಹೊಗಳಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಲಿಟಲ್ ಮಾಸ್ಟರ್ ಜತೆ ಆಡಿರುವುದೇ ನನ್ನ ಸೌಭಾಗ್ಯ ಎಂದಿರುವ ವೇಗದ ಬೌಲರ್, ಸಚಿನ್ ತೆಂಡೂಲ್ಕರ್ ಕ್ರಿಕೆಟ್ನ ನಿಜವಾದ ದೇವರು ಮತ್ತು ಅವರೊಂದಿಗೆ ವಿಶ್ವಕಪ್ ಆಡುವುದೇ ನನ್ನ ಕನಸು ಆಗಿತ್ತು ಎಂದು ಹೇಳಿದ್ದಾರೆ.
ಕ್ರಿಕೆಟ್ ಜಗತ್ತಿಗೆ ಸಚಿನ್ ತೆಂಡೂಲ್ಕರ್ ಅತ್ಯುತ್ತಮ ಉಡುಗೊರೆ ಮತ್ತು ಅವರೊಂದಿಗೆ ಕ್ರಿಕೆಟ್ ಆಡಲು ಅವಕಾಶ ಪಡೆದುಕೊಂಡಿರುವುದು ನಿಜಕ್ಕೂ ನಂಬಲು ಅಸಾಧ್ಯ ಎಂದು ಶ್ರೀಶಾಂತ್ ಹೇಳಿದ್ದಾರೆ. ಭಾರತದ ಕ್ರಿಕೆಟ್ ಉನ್ನತ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಅವರಿಗೆ ಸಲ್ಲಬೇಕು. ಅವರ ಪ್ರೇರಣೆ ಪಡೆದುಕೊಂಡು ಲಕ್ಷಾಂತರ ಜನರು ಕ್ರಿಕೆಟ್ ಆಡಲು ಪ್ರಾರಂಭಿಸಿದ್ದರು. ನಾನೂ ಕೂಡ ಅದರಿಂದ ಹೊರತಾಗಿಲ್ಲ ಎಂದಿದ್ದಾರೆ. ಅವರನ್ನು ಭೇಟಿಯಾಗಲು ಮಾತ್ರ ನಾನು ಬಯಸಿದ್ದೆ. ಆದರೆ, ವಿಶ್ವಕಪ್ ಗೆಲ್ಲುವ ವೇಳೆ ಅವರ ಪಕ್ಕದಲ್ಲಿ ನಿಂತಿರುವುದು ನಿಜಕ್ಕೂ ನನ್ನ ಪುಣ್ಯ ಎಂದಿದ್ದಾರೆ.
2007ರ ಟಿ-20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ವೇಳೆ ಶ್ರೀಶಾಂತ್ ಭಾರತ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು. ಟೀಂ ಇಂಡಿಯಾ ಪರ 27 ಟೆಸ್ಟ್ ಪಂದ್ಯ, 53 ಏಕದಿನ ಹಾಗೂ 10 ಟಿ-20 ಪಂದ್ಯಗಳನ್ನಾಡಿದ್ದು, 169 ವಿಕೆಟ್ ಪಡೆದುಕೊಂಡಿದ್ದಾರೆ.