ನವದೆಹಲಿ: ಭಾರತ ತಂಡದ ವೇಗದ ಬೌಲರ್ ಶಮಿ ಮಾಜಿ ಪತ್ನಿ ಹಸಿನ್ ಜಹಾನ್ ರಾಮ ಮಂದಿರ ಭೂಮಿ ಪೂಜೆ ದಿನದಂದು ಭಾರತೀಯರಿಗೆ ಶುಭ ಕೋರಿದ್ದರಿಂದ ತಮಗೆ ಅತ್ಯಾಚಾರ ಹಾಗೂ ಜೀವ ಬೆದರಿಕೆ ಕರೆಗಳು ಬರುತ್ತಿವೆಯಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಇನ್ನಿತರ ಬಿಜೆಪಿ ನಾಯಕರ ಸಮ್ಮುಖದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನಡೆಸಲಾಗಿತ್ತು. ಈ ವೇಳೆ ಭಾರತೀಯರಿಗೆ ಶುಭ ಕೋರಿದ್ದ ಕಾರಣಕ್ಕಾಗಿ ನನಗೆ ಅನಾಮಾದೇಯರಿಂದ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಭಾನುವಾರ ಹಸಿನ್ ಜಹಾನ್ ಕೋಲ್ಕತ್ತಾ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
" ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಭೂಮಿ ಪೂಜೆ ನಡೆದ ದಿನದಂದು ನಾನು ನಮ್ಮ ಹಿಂದೂ ಸಹೋದರ ಸಹೋದರಿಯರಿಗೆ ಶುಭ ಹಾರೈಸಿದ್ದೆ. ಆ ನಂತರ ನನಗೆ ಕೆಲವು ದುಷ್ಟ ಮನಸ್ಸಿನ ಜನರಿಂದ ನಿರಂತರವಾಗಿ ಕಿರುಕುಳ ಮತ್ತು ನಿಂದನೆಗೆ ಒಳಗಾಗುತ್ತಿರುವುದು ತುಂಬಾ ದುರದೃಷ್ಟಕರ. ಕೆಲವು ಜನರು ಜೀವ ಬೆದರಿಕೆಯೊಡ್ಡಿದರೆ, ಇನ್ನು ಕೆಲವು ಅತ್ಯಾಚಾರ ಮಾಡುವುದಾಗಿ ಕಿರುಕುಳ ಸಹ ನೀಡುತ್ತಿದ್ದಾರೆ " ಎಂದು ಕೋಲ್ಕತ್ತಾದ ಲಾಲ್ ಬಹದ್ದೂರ್ ಸ್ಟ್ರೀಟ್ ಸೈಬರ್ ಪೊಲೀಸ್ ಠಾಣೆಯ ದೂರು ದಾಖಲಿಸಿದ್ದಾರೆ.
ಸಾಮಾಜಿಕ ಜಾಲಾತಾಣದ ಮೂಲಕ ನನ್ನನ್ನು ನಿರಂತರಾಗಿದಾಳಿ ಮಾಡಲಾಗುತ್ತಿದೆ. ನನಗೆ ಅಸುರಕ್ಷಿತ ಭಾವನೆಗಳು ಉಂಟಾಗುತ್ತಿದ್ದು, ದಯವಿಟ್ಟು ಸಹಾಯ ಮಾಡಿ. ಇದೇ ರೀತಿ ಮುಂದುವರೆದರೆ, ನಾನು ಮಾನಸಿಕ ಖಿನ್ನತೆಗೊಳಗಾಗುವ ಸಾಧ್ಯತೆಯಿದೆ ಎಂದು ಹಸಿನ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ನಾನು ನನ್ನ ಮಗಳೊಂದಿಗೆ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದೇನೆ. ಆದ್ದರಿಂದ ನನಗೆ ಅಸುರಕ್ಷಿತ ಮನೋಭಾವನೆ ಉಂಟಾಗುತ್ತಿದೆ. ಪ್ರತೀ ಕ್ಷಣವೂ ನನಗೆ ದುಸ್ವಪ್ನದಂತೆ ಕಾಡುತ್ತಿದೆ. ಮಾನವೀಯತೆ ಆಧಾರದ ಮೇಲೆ ದಯೆ ತೋರಿಸುತ್ತೀರೆಂಬ ಭರವಸೆ ನನಗಿದೆ ಎಂದು ಹಸಿನ್ ಜಹಾನ್ ಅವರು ತಮ್ಮ ದೂರಿನಲ್ಲಿ ತಾವು ಅನುಭವಿಸುತ್ತಿರುವ ನೋವನ್ನು ಹೇಳಿಕೊಂಡಿದ್ದಾರೆ.