ಮುಂಬೈ: ಆರ್ಸಿಬಿ ವಿರುದ್ಧ ಶತಕ ಸಿಡಿಸಿ ಅಬ್ಬರಿಸಿದ್ದ ಕನ್ನಡಿಗ ರಾಹುಲ್ ಅವರನ್ನು ಪ್ರಸ್ತುತ ಐಪಿಎಲ್ನ ನಂಬರ್ ಒನ್ ಬ್ಯಾಟ್ಸ್ಮನ್ ಎಂದು ಮಾಜಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.
13ನೇ ಆವೃತ್ತಿಯ 6ನೇ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ರಾಹುಲ್ ಕೇವಲ 69 ಎಸೆತಗಳನ್ನು 7 ಸಿಕ್ಸರ್ ಹಾಗೂ 14 ಬೌಂಡರಿಗಳ ನೆರವಿನಿಂದ ದಾಖಲೆಯ 132 ರನ್ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದರಲ್ಲೂ ಡೇಲ್ ಸ್ಟೈನ್ನಂತಹ ಸ್ಟಾರ್ ಬೌಲರ್ಗೆ ಒಂದೇ ಓವರ್ನಲ್ಲಿ 26 ರನ್ ಗಳಿಸುವ ಮೂಲಕ ಆರ್ಭಟಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದ್ದರು. 207 ರನ್ಗಳ ಟಾರ್ಗೆಟ್ ಬೆನ್ನತ್ತಿದ ಆರ್ಸಿಬಿ 17 ಓವರ್‌ಗಳಲ್ಲಿ 109 ರನ್‌ಗಳಿಗೆ ಆಲೌಟ್ ಆಗುವ ಮೂಲಕ 97 ರನ್ಗಳ ಹೀನಾಯ ಸೋಲು ಕಂಡಿತ್ತು.
ರಾಹುಲ್, ಆರ್ಸಿಬಿ ವಿರುದ್ಧ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಸಂಯೋಜನೆ ಮಾಡಿದ್ದರು. ಪವರ್ ಪ್ಲೇನಲ್ಲಿ ವಿಕೆಟ್ ಕಳೆದುಕೊಳ್ಳಲು ಬಯಸದ ಅವರು ನಿಧಾನವಾಗಿ ಇನ್ನಿಂಗ್ಸ್ ಆರಂಭಿಸಿದರು. ಪಂದ್ಯ ಪೂರ್ತಿ ಸಮತೋಲನ ಬ್ಯಾಟಿಂಗ್ ನಡೆಸುತ್ತಾ ಕ್ರೀಸ್ನಲ್ಲಿ ನೆಲೆಯೂರಿದ್ದ ಅವರು ಕೊನೆಯಲ್ಲಿ ಅಬ್ಬರಿಸಿ ಅದ್ಭುತವಾಗಿ ಇನ್ನಿಂಗ್ಸ್ ಮುಗಿಸಿದರು.
ಅದರಲ್ಲೂ ಕೊಹ್ಲಿ ಬಿಟ್ಟ ಎರಡು ಕ್ಯಾಚ್ಗಳನ್ನು ಸದುಪಯೋಗಪಡಿಸಿಕೊಂಡ ರಾಹುಲ್ ಅವರು ಕೊನೆಯ ಎರಡು ಓವರ್‌ಗಳಲ್ಲಿ ತೋರಿದ ಬ್ಯಾಟಿಂಗ್ ಪ್ರದರ್ಶನ, ಆವರ ಬ್ಯಾಟಿಂಗ್ ಆಳವನ್ನು ತೋರಿಸುತ್ತದೆ. ಖಂಡಿತ ಅವರೊಬ್ಬ ಪರಿಪೂರ್ಣ ಬ್ಯಾಟ್ಸ್ಮನ್ ಆಗಿದ್ದು, ಈ ಬಾರಿ ಐಪಿಎಲ್ನಲ್ಲಿ ನಂಬರ್ 1 ಬ್ಯಾಟ್ಸ್ಮನ್ ಆಗಲಿದ್ದಾರೆ. ಹಾಗೂ ಎದುರಾಳಿಗಳಿಗೆ ದೊಡ್ಡ ತಲೆ ನೋವಾಗಲಿದ್ದಾರೆ. ಇವರಿಗಾಗಿಯೇ ಎದುರಾಳಿ ತಂಡಗಳು ವಿಶೇಷ ತಂತ್ರಗಾರಿಕೆಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ" ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸೂಪರ್ ಓವರ್ನಲ್ಲಿ ಸೋಲು ಕಂಡಿದ್ದ ಪಂಜಾಬ್ 2ನೇ ಪಂದ್ಯದಲ್ಲಿ 97 ರನ್ಗಳ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದೆ. ಈ ತಂಡ ಭಾನುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಾಡಲಿದೆ.