ಹೈದರಾಬಾದ್: ಆಸ್ಟ್ರೇಲಿಯಾ ವಿರುದ್ಧ 2001ರ ಈಡನ್ ಗಾರ್ಡನ್ ಟೆಸ್ಟ್ ಪಂದ್ಯ ಗೆದ್ದ ಸಂದರ್ಭದಲ್ಲಿ ಇಡೀ ಭಾರತ ತಂಡವೇ ನಮ್ಮ ಜೊತೆ ಸಂಭ್ರಮಾಚರಣೆ ಮಾಡುತ್ತಿದೆ ಎಂದು ಭಾಸವಾಗಿತ್ತು ಎಂದು ಭಾರತದ ಶ್ರೇಷ್ಠ ಬ್ಯಾಟ್ಸ್ಮನ್ ವಿವಿಎಸ್ ಲಕ್ಷ್ಮಣ್ ತಿಳಿಸಿದ್ದಾರೆ.
ಆಸ್ಟ್ರೇಲಿಯಾ ಭಾರತ ಪ್ರವಾಸ ಕೈಗೊಂಡು ಮುಂಬೈನಲ್ಲಿ ನಡೆದಿದ್ದ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಸತತ 15 ಟೆಸ್ಟ್ ಪಂದ್ಯ ಗೆದ್ದ ಸಾಧನೆ ಮಾಡಿತ್ತು. ಆದರೆ, ಆತಿಥೇಯ ಭಾರತ ತಂಡ ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ನಡೆದಿದ್ದ ಟೆಸ್ಟ್ಗಳನ್ನು ಗೆದ್ದು ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಗೆಲುವು ಸಾಧಿಸಿ ಸಂಭ್ರಮಿಸಿತ್ತು.
ಈಡನ್ ಗಾರ್ಡನ್ನಲ್ಲಿ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 171 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಅಸ್ಟ್ರೇಲಿಯಾ 445 ರನ್ಗಳಿಸಿತ್ತು. ಆದರೆ, ಎರಡನೇ ಇನ್ನಿಂಗ್ಸ್ನಲ್ಲಿ ಲಕ್ಷ್ಮಣ್ 281 ರನ್ ಹಾಗೂ ಕನ್ನಡಿಗ ರಾಹುಲ್ ದ್ರಾವಿಡ್ 180 ರನ್ಗಳ ನೆರವಿನಿಂದ 657/7 ರನ್ಗಳ ಬೃಹತ್ ಮೊತ್ತ ದಾಖಲಿಸಲು ನೆರವಾಗಿದ್ದರು.
383 ರನ್ಗಳ ಟಾರ್ಗೆಟ್ ಪಡೆದಿದ್ದ ಆಸ್ಟ್ರೇಲಿಯಾ ಭಾರತೀಯರ ಬೌಲಿಂಗ್ ದಾಳಿಗೆ ನಲುಗಿ 212 ರನ್ಗಳಿಗೆ ಆಲೌಟ್ ಆಗುವ ಮೂಲಕ 171 ರನ್ಗಳ ಸೋಲುಕಂಡಿತ್ತು. ವಿವಿಎಸ್ ಲಕ್ಷ್ಮಣ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ‘ನಾವು ಕೂಡಲೇ ಚೆನ್ನೈಗೆ ಹೋಗಬೇಕಿತ್ತು. ಆ ಸಂದರ್ಭದಲ್ಲಿ ಸಂಭ್ರಮ ಆಚರಿಸಲು ಬಹಳ ಕಡಿಮೆ ಸಮಯವಿತ್ತು. ಆದರೆ, ಆ ವಿಜಯದ ನಂತರ ಇಡೀ ದೇಶವೇ ನಮ್ಮೊಂದಿಗೆ ಸಂಭ್ರಮಿಸುತ್ತಿದೆ ಎಂದು ಭಾವಿಸಿದ್ದೆವು’ ಎಂದು ಲಕ್ಷ್ಮಣ್ ನನೆಪಿಸಿಕೊಂಡಿದ್ದಾರೆ.
ಹರ್ಭಜನ್ ಸಿಂಗ್ ಈಡನ್ ಟೆಸ್ಟ್ನಲ್ಲಿ ಹ್ಯಾಟ್ರಿಕ್ ಸೇರಿದಂತೆ ಸರಣಿಯಲ್ಲಿ 32 ವಿಕೆಟ್ ಪಡೆದುಕೊಂಡಿದ್ದರು. ಅವರು ಚಿಕ್ಕ ವಯಸ್ಸಿಗೆ ಅನುಭವಿ ಆಫ್ ಸ್ಪಿನ್ನರ್ರಂತೆ ಕಂಡಿದ್ದರು. ಅದರಲ್ಲೂ ತಮ್ಮ ಕಮ್ಬ್ಯಾಕ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು ಎಂದು ಹೇಳಿರುವ ಲಕ್ಷ್ಮಣ್ , ಅಂದಿನ ನಾಯಕ ಹಾಗೂ ಈಗಿನ ಬಿಸಿಸಿಐ ಅಧ್ಯಕ್ಷ ಗಂಗೂಲಿ ಭಜ್ಜಿಯ ಮೇಲೆ ನಂಬಿಕೆ ತೋರಿಸಿದ್ದಕ್ಕಾಗಿ ಶ್ಲಾಘಿಸಿದ್ದಾರೆ.
ತಂಡಕ್ಕೆ ಕಮ್ಬ್ಯಾಕ್ ಮಾಡಿದ ಯುವ ಆಟಗಾರನಿಗೆ ಆ ಪ್ರದರ್ಶನ ಅದ್ಭುತವೆನಿಸಿತ್ತು. ಅವರು ಖಂಡಿತವಾಗಿಯೂ ನಾಯಕ ಸೌರವ್ರಿಂದ ಸಾಕಷ್ಟು ವಿಶ್ವಾಸವನ್ನು ಪಡೆದರು. ಶ್ರೀನಾಥ್ ಅಥವಾ ಅನಿಲ್ ಕುಂಬ್ಳೆ ಇಲ್ಲದ ಕಾರಣ ದಾದಾ ಯುವ ಬೌಲರ್ ಬೆನ್ನಿಗೆ ನಿಂತಿದ್ದರು. ಭಜ್ಜಿ ಬೌಲಿಂಗ್ಗೆ ಹೊಡೆಯುವುದು ಬಹಳ ಕಠಿಣವಾಗಿತ್ತು. ಹ್ಯಾಟ್ರಿಕ್ ಪಡೆದದ್ದು ಸರಣಿಯ ಅತ್ಯುತ್ತಮ ಕ್ಷಣವಾಗಿತ್ತು. ಹ್ಯಾಟ್ರಿಕ್ ನಂತರ ಅವರ ಆತ್ಮವಿಶ್ವಾಸ ಹೆಚ್ಚಾಗಿತ್ತು , ಅವರು ಕೆಲವು ಅದ್ಭುತ ಕ್ಯಾಚ್ಗಳನ್ನು ಪಡೆದಿದ್ದರು ಎಂದು ಲಕ್ಷ್ಮಣ್ ತಿಳಿಸಿದ್ದಾರೆ.