ಮ್ಯಾಂಚೆಸ್ಟರ್(ಇಂಗ್ಲೆಂಡ್): ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಶ್ವಕಪ್ನಲ್ಲಿ ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಸೆಮಿಫೈನಲ್ ಪಂದ್ಯ ಆಡುವ ಮೂಲಕ ನೂತನ ದಾಖಲೆ ನಿರ್ಮಿಸಿದ್ದಾರೆ.
ಬರೋಬ್ಬರಿ 350 ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಿರುವ ಧೋನಿ ಇಷ್ಟೊಂದು ಪಂದ್ಯಗಳಲ್ಲಿ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಿದ್ದು, ಈ ಸಾಧನೆಗೈದ ಮೊದಲ ಪ್ಲೇಯರ್ ಎಂಬ ಕೀರ್ತಿಗೆ ಭಾಜನರಾದರು.
ಇದುವರೆಗೆ ಭಾರತದ ಪರ 347 ಮತ್ತು ಏಷ್ಯಾ ಇಲೆವೆನ್ ಪರವಾಗಿ 3 ಪಂದ್ಯ ಸೇರಿ ಒಟ್ಟು 350 ಏಕದಿನ ಪಂದ್ಯಗಳನ್ನು ಅವರು ಆಡಿದ್ದಾರೆ. ಇದರಲ್ಲಿ 200 ಪಂದ್ಯಗಳಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ಆಗಿ ತಂಡ ಮುನ್ನಡೆಸಿರುವ ಶ್ರೇಯ ಸಹ ಇವರ ಪಾಲಾಗಿದೆ.
ವಿಶೇಷವೆಂದರೆ, ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕಾರ ಒಟ್ಟು 360 ಪಂದ್ಯಗಳಲ್ಲಿ ವಿಕೇಟ್‌ಕೀಪರ್ ಆಗಿ ಮೈದಾನಕ್ಕಿಳಿದಿದ್ದರೂ, 44 ಪಂದ್ಯಗಳಲ್ಲಿ ಅವರನ್ನು ಬ್ಯಾಟ್ಸಮನ್ ಎಂದು ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. ಆದರೆ ಧೋನಿ ಎಲ್ಲ ಪಂದ್ಯಗಳಲ್ಲೂ ಕೀಪರ್ ಆಗಿ ಕಾರ್ಯನಿರ್ವಹಿಸಿರುವುದು ವಿಶೇಷವಾಗಿದೆ.
ಈ ಪಂದ್ಯದೊಂದಿಗೆ 350 ಪಂದ್ಯಗಳನ್ನಾಡಿರುವ ಪಟ್ಟಿಯಲ್ಲಿ ಧೋನಿ 10ನೇ ಆಟಗಾರನಾಗಿದ್ದು, ಈಗಾಗಲೇ ಸಚಿನ್ ತೆಂಡೂಲ್ಕರ್ 463 ಏಕದಿನ ಪಂದ್ಯ, ಮಹೇಲ ಜಯವರ್ಧನೆ (448), ಸನತ್ ಜಯಸೂರ್ಯ (445), ಕುಮಾರ ಸಂಗಕ್ಕಾರ (404), ಪಾಕಿಸ್ತಾನದ ಶಾಹಿದ್ ಆಫ್ರಿದಿ (398), ಇನ್ಜಮಾಮ್ ಉಲ್ ಹಕ್ (378), ರಿಕಿ ಪಾಂಟಿಂಗ್ (375), ವಾಸಿಂ ಅಕ್ರಂ (356) ಮತ್ತು ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (350 ಪಂದ್ಯಗಳು) ಇದ್ದಾರೆ.