ಲಾಹೋರ್: ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಮೈದಾನದಲ್ಲಿ ನಿವೃತ್ತಿ ಘೋಷಿಸಬೇಕಿತ್ತು ಎಂದು ಪಾಕಿಸ್ತಾನದ ಲೆಜೆಂಡರಿ ಬ್ಯಾಟ್ಸ್ಮನ್ ಇಂಜಮಾಮ್ ಉಲ್ ಹಕ್ ಅಭಿಪ್ರಾಯ ಪಟ್ಟಿದ್ದಾರೆ.
ಶನಿವಾರ ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್ ಧೋನಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿಯಾಗಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ವಿಶ್ವದ ಕ್ರಿಕೆಟ್ ದಿಗ್ಗಜರೆಲ್ಲ ಧೋನಿಗೆ ಶುಭಹಾರೈಸಿದ್ದರು. ಆದರೆ, ಇಂಜಮಾಮ್ ಪ್ರಕಾರ ಧೋನಿ ನಿವೃತ್ತಿ ಘೋಷಿಸಿದ ರೀತಿ ಸರಿಯಲ್ಲ ಎಂದಿದ್ದಾರೆ.
ಧೋನಿ ಆಟ ನೋಡಲು ಇಡೀ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳು ಬಯಸಿದ್ದಾರೆ. ನನ್ನ ಪ್ರಕಾರ ಇಂತಹ ಮಹಾನ್ ಆಟಗಾರ ಮನೆಯಲ್ಲಿ ಕುಳಿತು ನಿವೃತ್ತಿ ಪ್ರಕಟಿಸಬಾರದು. ಅವರು ಕ್ರಿಕೆಟ್ ಮೈದಾನದಲ್ಲಿ ನಿವೃತ್ತಿಯಾಗಬೇಕಿತ್ತು ಎಂದು ಇಂಜಮಾಮ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ತಿಳಿಸಿದ್ದಾರೆ.
ಇದೇ ವಿಚಾರವನ್ನ ನಾನು ಸಚಿನ್ ಅವರಿಗೆ ಹೇಳಿದ್ದೆ. ನೀವು ಬೃಹತ್ ಅಭಿಮಾನಿ ಬಳಗ ಹೊಂದಿದ್ದರೆ, ನಿಮ್ಮ ಕ್ರಿಕೆಟ್ ಜರ್ನಿ ಮೈದಾನದಲ್ಲಿ ಮುಗಿಯಬೇಕು. ನೀವು ಎಲ್ಲಿ ಇಷ್ಟೊಂದು ಗೌರವ್, ಸ್ಟಾರ್ಡಮ್ ಗಳಿಸಿಕೊಂಡಿದ್ದೀರೋ ಅಲ್ಲಿ ನಿವೃತ್ತಿಯಾಗಬೇಕು. ಇನ್ನು ಧೋನಿ ಕೂಡ ಈ ರೀತಿ ನಿರ್ಧಾರ ಮಾಡಿದ್ದರೆ ನನ್ನನ್ನು ಸೇರಿ ಅವರ ಕೋಟ್ಯಂತರ ಅಭಿಮಾನಿಗಳು ತುಂಬಾ ಖುಷಿಯಾಗಿರುತ್ತಿದ್ದರು. ಈಗಲೂ ನಾನು ಧೋನಿಯನ್ನು ಭಾರತದ ಅತ್ಯುತ್ತಮ ನಾಯಕ ಎಂದೇ ಭಾವಿಸಿದ್ದೇನೆ ಎಂದಿದ್ದಾರೆ.
ಧೋನಿ ನಾಯಕತ್ವವನ್ನು ಮೆಚ್ಚಿ ಕೊಂಡಿರುವ ಇಂಜಮಾಮ್, ಧೋನಿ, ಆರ್ ಆಶ್ವಿನ್ ಮತ್ತು ಸುರೇಶ್ ರೈನಾ ಅವರಂತಹ ಮ್ಯಾಚ್ ವಿನ್ನರ್ಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅವರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವುದು, ಅವರಿಗೆ ಉತ್ತಮ ರೀತಿಯ ಅವಕಾಶ ಕಲ್ಪಿಸಿಕೊಡುವುದನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.
ಧೋನಿ ಆಟವನ್ನು ಹೇಗೆ ಮುಕ್ತಾಯಗೊಳಿಸಬೇಕು ಎಂದು ಚೆನ್ನಾಗಿ ಬಲ್ಲವರಾಗಿದ್ದರು. ಅವರು ಪ್ರತಿ ಪಂದ್ಯದಲ್ಲೂ ಶತಕ ಸಿಡಿಸುವಂತ ಆಟಗಾರ ಅಲ್ಲದೇ ಇರಬಹುದು, ಆದರೆ ಉತ್ತಮ ರೀತಿಯಲ್ಲಿ ಇನ್ನಿಂಗ್ಸ್ ಕಟ್ಟುವುದರಲ್ಲಿ ಹಾಗೂ ತಂಡ ಜಯದೊಂದಿಗೆ ಫಿನಿಶಿಂಗ್ ಮಾಡುವುದರಲ್ಲಿ ಅವರು ಯಶಸ್ವಿಯಾಗುತ್ತಿದ್ದರು ಎಂದು ತಿಳಿಸಿದ್ದಾರೆ.