ಹೈದರಾಬಾದ್ : ಸೆಪ್ಟೆಂಬರ್ 18ರಂದು ವಿಶ್ವದಲ್ಲೇ ಶ್ರೀಮಂತ ಕ್ರಿಕೆಟ್ ಲೀಗ್ ಎಂದು ಹೆಸರು ಪಡೆದಿರುವ ಐಪಿಎಲ್ ಆರಂಭವಾಗಲಿದೆ. ಐಪಿಎಲ್ನ ಯಶಸ್ವಿ ತಂಡ ಧೋನಿ ನೇತೃತ್ವದ ಸಿಎಸ್‌ಕೆ ಮೊದಲ ತಂಡವಾಗಿ ಯುಎಇಗೆ ಪಯಣಿಸಲಿದೆ.
ವರದಿಗಳ ಪ್ರಕಾರ, ಅಗಸ್ಟ್ 20ರೊಳಗೆ ಹೆಚ್ಚಿನ ತಂಡಗಳು ಯುಎಇ ತಲುಪುವ ನಿರೀಕ್ಷೆಯಿದೆ. ಆದರೆ, ಪರಿಸ್ಥಿತಿಗೆ ಒಗ್ಗಿಕೊಳ್ಳಲು ಮತ್ತು ಟೂರ್ನಾಮೆಂಟ್ಗೆ ತಯಾರಾಗಲು ಸಿಎಸ್‌ಕೆ ಇತರೆ ತಂಡಗಳಿಗೆ ಒಂದು ವಾರ ಮುಂಚಿತವಾಗಿ ಅಲ್ಲಿಗೆ ಹೋಗಲು ಬಯಸಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಆಟಗಾರರು ಸುದೀರ್ಘ ವಿರಾಮ ಪಡೆದಿರುವುದರಿಂದ ಬೇಗನೆ ಅಭ್ಯಾಸ ಆರಂಭಿಸಲು ಸಿಎಸ್‌ಕೆ ಬಯಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಗಮನಾರ್ಹ ಸಂಗತಿಯೆಂದರೆ ಸಿಎಸ್‌ಕೆ ತಂಡದಲ್ಲಿ ಹೆಚ್ಚಿನ ಆಟಗಾರರು 30 ವಯೋಮಿತಿಯನ್ನು ದಾಟಿದವರಾಗಿದ್ದಾರೆ. ಧೋನಿ ಸೇರಿ ಮೂವರು ಆಟಗಾರರು ಕಳೆದ ಒಂದು ವರ್ಷದಲ್ಲಿ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಧೋನಿ 2019 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಕೊನೆಯ ಬಾರಿಗೆ ಆಡಿದ್ದರೆ, ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ಕಳೆದ ಐಪಿಎಲ್ನಲ್ಲೇ ಕೊನೆಯ ಬಾರಿಗೆ ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿದ್ದರು.
ಸರ್ಕಾರ ಲಾಕ್ಡೌನ್ ಸಡಿಲಿಕೆ ಮಾಡಿದ ನಂತರ ಕೆಲವು ಸಿಎಸ್‌ಕೆ ಆಟಗಾರರು ತಮಗೆ ಲಭ್ಯವಿರುವ ಹೊರಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸ ಶುರು ಮಾಡಿದ್ದಾರೆ. ಸಿಎಸ್‌ಕೆ ತಂಡದ ಉಪನಾಯಕ ಸುರೇಶ್ ರೈನಾ ಹಾಗೂ ಹಿರಿಯ ಸ್ಪಿನ್ನರ್ ಪಿಯುಷ್ ಚಾವ್ಲಾ ಅಭ್ಯಾಸ ಆರಂಭಿಸಿರುವುದನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 19ರಿಂದ ನವೆಂಬರ್ 8ರವರೆಗೆ ಐಪಿಎಲ್ ನಡೆಯಲಿದೆ. ಇದಕ್ಕಾಗಿ ಬಿಸಿಸಿಐ ಈಗಾಗಲೇ ವಿದೇಶದಲ್ಲಿ ಟೂರ್ನಿ ಆಯೋಜಿಸಲು ಭಾರತ ಸರ್ಕಾರದ ಅನುಮತಿ ಕೋರಿದೆ. ಕೇಂದ್ರ ಸರ್ಕಾರ ಒಪ್ಪಿಗೆ ನೀಡುತ್ತಿದ್ದಂತೆ ಮುಂದಿನ ಸಿದ್ಧತೆ ಬಗ್ಗೆ ತಿಳಿಸಲಿದೆ.
ಐಪಿಎಲ್ನ ಸಂಪೂರ್ಣ ವೇಳಾಪಟ್ಟಿ ಇನ್ನು ಹೊರ ಬಂದಿಲ್ಲ. ಆದರೆ, ಆರಂಭದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತನ್ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯಲಿದೆ.