ಢಾಕಾ: ಕೋವಿಡ್-19 ಸಾಂಕ್ರಾಮಿಕ ರೋಗದ ಒತ್ತಡ ಉಲ್ಲೇಖಿಸಿರುವ ಕ್ರಿಕೆಟ್ ವೆಸ್ಟ್ ಇಂಡೀಸ್, ಮುಂದಿನ ವರ್ಷದ ಆರಂಭದಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು ಮೂರರಿಂದ ಎರಡು ಪಂದ್ಯಗಳಿಗೆ ಇಳಿಸುವ ಸಾಧ್ಯತೆ ಇದೆ ಎಂದಿದೆ.
ಏಕದಿನ ಪಂದ್ಯಗಳು, ಎರಡು ಟಿ-20 ಪಂದ್ಯಗಳು ಮತ್ತು ಮೂರು ಟೆಸ್ಟ್ ಪಂದ್ಯಗಳನ್ನು ಒಳಗೊಂಡ ಸರಣಿಗೆ ಲಭ್ಯವಿರುವ ಅತ್ಯುತ್ತಮ ತಂಡವನ್ನು ಜನವರಿಯಲ್ಲಿ ಪ್ರವಾಸಕ್ಕೆ ಕಳುಹಿಸಲಾಗುವುದು ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಭರವಸೆ ನೀಡಿತ್ತು, ಆದರೆ ಇದೀಗ ಟೆಸ್ಟ್ ಪಂದ್ಯಗಳನ್ನು ಕಡಿಮೆ ಮಾಡಲು ಬಯಸಿದೆ.
ಮೂರರಿಂದ ಎರಡು ಟೆಸ್ಟ್‌ಗಳಿಗೆ ಇಳಿಸುವ ಆಯ್ಕೆ ಇದೆ, ಆದರೆ, ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಮುಂದಿನ ಕೆಲವೇ ದಿನಗಳಲ್ಲಿ ಇದನ್ನು ಅಂತಿಮಗೊಳಿಸಲಾಗುವುದು ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಅಧ್ಯಕ್ಷ ರಿಕಿ ಸ್ಕೆರಿಟ್ ಹೇಳಿದ್ದಾರೆ.
ಕೋವಿಡ್-19 ವೇಳಾಪಟ್ಟಿ ಮತ್ತು ವೆಚ್ಚ ಸೇರಿದಂತೆ ಎಲ್ಲ ದೃಷ್ಟಿಕೋನಗಳಿಂದ ನೋಡಬೇಕಾಗಿದೆ. ಈ ದಿನಗಳಲ್ಲಿ ಕೋವಿಡ್, ವಿಶ್ವ ಕ್ರಿಕೆಟ್‌ಗೆ ತಂದಿರುವ ಒತ್ತಡಗಳು ಆದಾಯದ ದೃಷ್ಟಿಯಿಂದ ಗಮನಾರ್ಹವಾಗಿವೆ ಎಂದಿದ್ದಾರೆ. ನಾವು ಬಾಂಗ್ಲಾದೇಶಕ್ಕೆ ಬರಲು ಬಯಸುತ್ತೇವೆ ಏಕೆಂದರೆ ನಾವು ಹೊಂದಿರುವ ಸಂಬಂಧ ಮತ್ತು ದ್ವಿಪಕ್ಷೀಯ ಒಪ್ಪಂದಗಳನ್ನು ನಾವು ಗೌರವಿಸುತ್ತೇವೆ ಅಂತ ರಿಕಿ ಸ್ಕೆರಿಟ್ ತಿಳಿಸಿದ್ದಾರೆ.
ಮಾರ್ಚ್‌ನಿಂದ ಬಾಂಗ್ಲಾದೇಶ ಇನ್ನೂ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿಲ್ಲ, ಆದರೆ, ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ವೆಸ್ಟ್ ಇಂಡೀಸ್, ಕೋವಿಡ್ ನಂತರ ವಿದೇಶಕ್ಕೆ ತೆರಳಿ ಕ್ರಿಕೆಟ್ ಸರಣಿ ಆಡಿದ ಮೊದಲ ದೇಶವಾಗಿದೆ.
ವೆಸ್ಟ್ ಇಂಡೀಸ್ ಪ್ರಸ್ತುತ ಮೂರು ಟಿ-20 ಮತ್ತು ಎರಡು ಟೆಸ್ಟ್ ಪಂದ್ಯಗಳಿಗಾಗಿ ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಂಡಿದ್ದು, ಈ ಸರಣಿ ಡಿಸೆಂಬರ್ 15 ಕ್ಕೆ ಕೊನೆಗೊಳ್ಳಲಿದೆ.