ಜೋಹಾನ್ಸ್‌ಬರ್ಗ್: ಆಫ್ರೋ–ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್ಡ್ ಹತ್ಯೆ ನಂತರ ಆರಂಭವಾದ 'ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಆಂದೋಲನ ಮತ್ತೆ ಚುರುಕು ಪಡೆದುಕೊಂಡಿದೆ. ಎಲ್ಲಾ ರೀತಿಯ ತಾರತಮ್ಯಗಳ ಕುರಿತು ಇತರರಿಗೆ ಶಿಕ್ಷಣ ನೀಡಲು, ಅವುಗಳ ವಿರುದ್ಧ ಹೋರಾಡಲು ಮತ್ತು ಒಗ್ಗಟ್ಟು ಪ್ರದರ್ಶಿಸಿಲು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ (ಸಿಎಸ್‌ಎ) ವೇದಿಕೆಯೊಂದನ್ನು ಸ್ಥಾಪಿಸಿದೆ.
ಮಂಡಳಿಯ ಸಿಇಒ ಜಾಕ್ವೆಸ್ ಫೌಲ್ ಈ ಕುರಿತು ಮಾತನಾಡಿ, 56 ದಶಲಕ್ಷಕ್ಕೂ ಅಧಿಕ ದಕ್ಷಿಣ ಆಫ್ರಿಕರನ್ನರಿಗೆ ವರ್ಣಭೇದ ನೀತಿಯ ವಿರುದ್ಧ ಹೋರಾಡಲು ಮತ್ತು ಎಲ್ಲಾ ತಾರತಮ್ಯಗಳ ವಿರುದ್ಧ ಧ್ವನಿಯೆತ್ತಲು ಈ ವೇದಿಕೆ ಸ್ಥಾಪಿಸಿರುವುದು ರಾಷ್ಟ್ರೀಯ ಕ್ರೀಡಾ ಸಂಸ್ಥೆಯಾಗಿ ನಮ್ಮ ಭಾಗ್ಯ. ಈ ಮೂಲಕ ಎಲ್ಲರೂ ಒಗ್ಗಟ್ಟು ಪ್ರದರ್ಶಿಸುತ್ತೇವೆ ಎಂದು ಹೇಳಿದರು.
ಸಿಎಸ್ಎ ಅನ್ನು ಜನಾಂಗಿಯೇತರತೆ ಮತ್ತು ಏಕತೆಯ ತತ್ವಗಳ ಮೇಲೆ ಸ್ಥಾಪಿಸಲಾಯಿತು. ಜುಲೈ 18ರಂದು ನೆಲ್ಸನ್ ಮಂಡೇಲಾ ದಿನಾಚರಣೆಯ ಸಂದರ್ಭದಲ್ಲಿ 'ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಅಭಿಯಾನದ ಮೂಲಕ ತಾರತಮ್ಯಗಳನ್ನು ಖಂಡಿಸಲಾಗುತ್ತದೆ. ಅಂದು ನಾವು ಎಲ್ಲಾ ರೀತಿಯ ಹಿಂಸಾಚಾರದ ವಿರುದ್ಧವೂ ಮಾತನಾಡುತ್ತೇವೆ ಎಂದರು.
ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಆಟಗಾರರು ವರ್ಣಭೇದ ನೀತಿಯ ವಿರುದ್ಧ ಒಗ್ಗಟ್ಟನ್ನು ತೋರಿಸಲು ಮತ್ತು ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಆಂದೋಲನವನ್ನು ಬೆಂಬಲಿಸಲು ಭೂಮಿಗೆ ಮೊಣಕಾಲೂರಿದರು. ತಮ್ಮ ಜರ್ಸಿಯಲ್ಲಿ 'ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಲೋಗೋ ಪ್ರದರ್ಶಿಸಿದರು.