ಸಿಡ್ನಿ: ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಕಳೆದ ಒಂದೆರಡು ವರ್ಷಗಳಿಂದ ಮಿಂಚುತ್ತಿರುವ ಕನ್ನಡಿಗ ಕೆ.ಎಲ್.ರಾಹುಲ್ರನ್ನು ತಮ್ಮ ನೆಚ್ಚಿನ ಬ್ಯಾಟ್ಸ್ಮನ್ ಎಂದಿರುವ ವಿಂಡೀಸ್ ದಿಗ್ಗಜ ಬ್ರಿಯಾನ್ ಲಾರಾ, ಅವರ ಆಟವನ್ನು ದುಡ್ಡು ಕೊಟ್ಟಾದರೂ ನೋಡಲು ಬಯಸುತ್ತೇನೆ ಎಂದಿದ್ದಾರೆ.
2021ರ ಐಪಿಎಲ್ನಲ್ಲಿ ರಾಹುಲ್ ಆಟವನ್ನು ನೋಡಿ ಪ್ರಭಾವಿತರಾಗಿರುವ ಲಾರಾ, ಈಗಾಗಲೇ ಹಲವು ಬಾರಿ ರಾಹುಲ್ ಬಗ್ಗೆ ಗುಣಗಾನ ಮಾಡಿದ್ದಾರೆ. ಇದೀಗ ಪ್ರಸ್ತುತ ವಿಶ್ವ ಕ್ರಿಕೆಟ್ನಲ್ಲಿ ತಮ್ಮ ನೆಚ್ಚಿನ ಆಟಗಾರ ಎಂದು ಕನ್ನಡಿಗನನ್ನು ಕೊಂಡಾಡಿದ್ದಾರೆ. ರಾಹುಲ್ ಪ್ರಸ್ತುತ ಆಸ್ಟ್ರೇಲಿಯಾ ಸರಣಿಯಲ್ಲಿ 81 ರನ್ ಗಳಿಸಿದ್ದಾರೆ. ಕೊನೆಯ ಪಂದ್ಯದಲ್ಲಿ ಡಕ್ಔಟ್ ಆಗುವ ಮೂಲಕ ನಿರಾಶೆ ಅನುಭವಿಸಿದರು. ಆದರೆ ಐಪಿಎಲ್ನಲ್ಲಿ ಅವರು 14 ಇನ್ನಿಂಗ್ಸ್ಗಳಿಂದ 670 ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದರು.
'7 ಕ್ರಿಕೆಟ್' ಚಾನೆಲ್ನಲ್ಲಿ ರಿಕಿ ಪಾಂಟಿಂಗ್ ಜೊತೆ ನಡೆಸಿದ ಸಂವಾದದ ವೇಳೆ ತಮ್ಮ ನೆಚ್ಚಿನ ಕ್ರಿಕೆಟಿಗ ಯಾರು ಎಂಬ ಪ್ರಶ್ನೆಗೆ ಲಾರಾ, ಕರ್ನಾಟಕದ ಆಟಗಾರನ ಹೆಸರು ಹೇಳಿದ್ದಾರೆ.
"ನೀವು ಪ್ರಸ್ತುತ ಆಡುತ್ತಿರುವ 2 ತಂಡಗಳ ಬಗ್ಗೆ ಮಾತನಾಡುತ್ತಿದ್ದರೆ, ನನ್ನ ಉತ್ತರ ತುಂಬಾ ಸುಲಭ, ಅದು ರಾಹುಲ್, ಖಂಡಿತವಾಗಿಯೂ ನಾನು ರಾಹುಲ್ ಬ್ಯಾಟಿಂಗ್ ಹಣ ಪಾವತಿಸಿಯಾದರೂ ನೋಡಲು ಇಷ್ಟಪಡುತ್ತೇನೆ. ವಿಶೇಷವಾಗಿ ಅವರ ಟಿ-20 ಪಂದ್ಯಗಳನ್ನು ನೋಡಲು ಇಚ್ಛಿಸುತ್ತೇನೆ. ನೀವು ಈ ಹುಡುಗ ತಂತ್ರಗಾರಿಕೆಯಿಂದ ರನ್ ಗಳಿಸುವುದನ್ನು ನೋಡುವುದು ನಿಜಕ್ಕೂ ರೋಮಾಂಚಕವಾಗಿರುತ್ತದೆ" ಎಂದು ಲಾರಾ ಹೇಳಿದ್ದಾರೆ.
ಇದನ್ನು ಓದಿ: ಕ್ಲೀನ್ಸ್ವೀಪ್ ಜಸ್ಟ್ ಮಿಸ್: ಕೊನೆಯ ಪಂದ್ಯ ಸೋತು 2-1ರಲ್ಲಿ ಟಿ20 ಸರಣಿಗೆ ಗೆದ್ದ ಕೊಹ್ಲಿ ಬಳಗ
ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಟಿಂಗ್ ಕೂಡ ರಾಹುಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಆತ ತುಂಬಾ ಆಸಕ್ತಿಕರ ವ್ಯಕ್ತಿ. ಎರಡು ಮೂರು ವರ್ಷಗಳ ಹಿಂದೆ ಟೆಸ್ಟ್ ಕ್ರಿಕೆಟ್ಗೆ ಮೀಸಲಾದ ಬ್ಯಾಟ್ಸ್ಮನ್ ಆಗಿದ್ದರು. ಅವರ ತಂತ್ರಗಾರಿಕೆ ಕೂಡ ಟೆಸ್ಟ್ಗೆ ಸರಿಹೊಂದುವಂತಿತ್ತು. ಆದರೆ ಆತ ಕಳೆದ ಎರಡು ಐಪಿಎಲ್ನಲ್ಲಿ ಟಿ-20 ಶೈಲಿಯ ಬ್ಯಾಟಿಂಗ್ ನಂಬಲಸಾಧ್ಯವಾಗಿದೆ. ಅವರು ಬಹುಬೇಗ ಟಿ-20ಗೆ ಪರಿವರ್ತನೆಗೊಂಡಿದ್ದಾರೆ. ಆದರೆ ಇದು ಅಷ್ಟು ಸುಲಭವಾಗಿ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ರಾಹುಲ್ ಟೆಸ್ಟ್ ಬ್ಯಾಟ್ಸ್ಮನ್ ಆಗಿ 2014ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಆದರೆ ನಂತರ ಟಿ-20 ಕ್ರಿಕೆಟ್ನಲ್ಲಿ 2 ಶತಕ ಸಿಡಿಸುವ ಮೂಲಕ ರೋಹಿತ್ ನಂತರ ಭಾರತದ ಬೆಸ್ಟ್ ಓಪನರ್ ಆಗಿ ಬದಲಾದರು. ಪ್ರಸ್ತುತ ಅವರು ಭಾರತದ ಪರ 41 ಟಿ-20 ಪಂದ್ಯಗಳಲ್ಲಿ 1542 ರನ್ ಸಿಡಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 12 ಅರ್ಧಶತಕ ಸೇರಿವೆ.