ನವದೆಹಲಿ: ಸ್ವಿಂಗ್ ಕಿಂಗ್ ಎಂದೇ ಖ್ಯಾತರಾಗಿರುವ ಭುವನೇಶ್ವರ್ ಕುಮಾರ್ ಮುಂಬರುವ ಟಿ20 ವಿಶ್ವಕಪ್ನಲ್ಲಿ ಭಾರತ ತಂಡದಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅಭಿಪ್ರಾಯ ಪಟ್ಟಿದ್ದಾರೆ.
ಹಿರಿಯ ವೇಗಿ ತೊಡೆ ಸ್ನಾಯು ಸೆಳೆತಕ್ಕೆ ಒಳಗಾಗಿ ಯುಎಇನಲ್ಲಿ ನಡೆದಿದ್ದ ಐಪಿಎಲ್ನಿಂದ ಹೊರಬಿದ್ದಿದ್ದರು. ಜೊತೆಗೆ ಆಸ್ಟ್ರೇಲಿಯಾ ಪ್ರವಾಸ ಮತ್ತು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ತಪ್ಪಿಸಿಕೊಂಡಿದ್ದರು.
ಭುವನೇಶ್ವರ್ ಕುಮಾರ್ ಫಿಟ್ನೆಸ್ ಮರಳಿ ಪಡೆದಿರುವುದಕ್ಕೆ ನನಗೆ ತಂಬಾ ಸಂತೋಷವಾಗಿದೆ. ಏಕೆಂದರೆ ಅವರು ಭಾರತ ತಂಡದ ಪ್ರಮುಖ ಬೌಲರ್, ವಿಶೇಷವಾಗಿ ವೈಟ್ಬಾಲ್ ಕ್ರಿಕೆಟ್ನಲ್ಲಿ ಅವರ ಪಾತ್ರ ಮಹತ್ವವಾದದ್ದು ಎಂದು ಲಕ್ಷ್ಮಣ್ ತಿಳಿಸಿದ್ದಾರೆ.
ಇದನ್ನು ಓದಿ:ಭಾರತ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ: ಬಟ್ಲರ್
ಜಸ್ಪ್ರೀತ್ ಬುಮ್ರಾರನ್ನು ಹೊರತುಪಡಿಸಿದರೆ, ಭಾರತ ತಂಡದ ಬೌಲಿಂಗ್ ಲೈನ್ಅಪ್ನಲ್ಲಿ ಯಾರಾದರೂ ಅನುಭವಿ ಬೌಲರ್ ಇರಬೇಕು, ಅದು ಕೇವಲ ಹೊಸ ಚೆಂಡಿನಲ್ಲಿ ಮಾತ್ರವಲ್ಲದೆ, ಡೆತ್ ಓವರ್ ನಿರ್ವಹಿಸಬಲ್ಲವರಾಗಿರಬೇಕು. ಅದಕ್ಕೆ ಭುವನೇಶ್ವರ್ ಸೂಕ್ತ, ಅವರು ನವೆಂಬರ್ನಲ್ಲಿ ನಡೆಯುವ ವಿಶ್ವಕಪ್ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭುವಿ ಶೇಕಡಾ 100 ರಷ್ಟು ಫಿಟ್ ಆಗಿರಬೇಕಾದರೆ, ಕೆಲಸದ ಹೊರೆ ಮತ್ತು ಅವರ ಗಾಯವನ್ನು ನಿರ್ವಹಿಸಲು ಸಾಕಷ್ಟು ಆದ್ಯತೆ ಮತ್ತು ಪ್ರಾಮುಖ್ಯತೆಯನ್ನು ನೀಡಬೇಕಾಗಿದೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ಇಂಗ್ಲೆಂಡ್ ವಿರುದ್ಧದ 5 ಟಿ20 ಪಂದ್ಯಗಳಲ್ಲಿ ಕೆಲವು ಪಂದ್ಯಗಳು ವಿಶ್ರಾಂತಿ ಪಡೆಯಬೇಕೆಂದು ಲಕ್ಷ್ಮಣ್ ಸಲಹೆ ನೀಡಿದ್ದಾರೆ.
ಇದನ್ನು ಓದಿ:ಯುವಕರಿಗೆ ಸೂರ್ಯಕುಮಾರ್ ಯಾದವ್ ರೋಲ್ ಮಾಡೆಲ್: ವಿವಿಎಸ್ ಲಕ್ಷ್ಮಣ್