ನವದೆಹಲಿ: ಬಿಸಿಸಿಐ ಅಧ್ಯಕ್ಷ ಗಾದಿಗೆ ಏರಿದ ಬಳಿಕ ಅಹರ್ನಿಶಿ ಟೆಸ್ಟ್ ಪಂದ್ಯ ಆಯೋಜನೆಗೆ ಹೆಚ್ಚಿನ ಆಸಕ್ತಿ ವಹಿಸಿರುವ ಸೌರವ್ ಗಂಗೂಲಿ, ಕನಸು ಶೀಘ್ರದಲ್ಲೇ ಈಡೇರುವ ಸಾಧ್ಯತೆ ಇದೆ ಎನ್ನುತ್ತಿವೆ ಮೂಲಗಳು.
ನವೆಂಬರ್ ತಿಂಗಳಲ್ಲಿ ಬಾಂಗ್ಲಾದೇಶ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಭಾರತದ ಕ್ರಿಕೆಟ್ ಕಾಶಿಯಲ್ಲಿ ಹೊನಲು-ಬೆಳಕಿನ ಟೆಸ್ಟ್ ಪಂದ್ಯ ನಡೆಯುವ ಸಾಧ್ಯತೆ ಇದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್(ಬಿಸಿಬಿ) ಮಾಹಿತಿ ನೀಡಿದೆ.
ನವೆಂಬರ್ 14ರಂದು ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಬಾಂಗ್ಲಾ ವಿರುದ್ಧ ಎರಡನೇ ಟೆಸ್ಟ್ ನಡೆಯಲಿದ್ದು, ಈ ಪಂದ್ಯವನ್ನು ಹೊನಲು-ಬೆಳಕಿನಲ್ಲಿ ನಡೆಸಲು ಬಿಸಿಸಿಐ ತೀಮಾರ್ನಿಸಿ ಬಿಸಿಬಿ ಅನುಮತಿ ಕೇಳಿದೆ.
ಬಿಸಿಸಿಐ ಮನವಿ ಬಗ್ಗೆ ಮಾತನಾಡಿರುವ ಬಿಸಿಬಿ ಕ್ರಿಕೆಟ್ ಆಪರೇಷನ್ ಮುಖ್ಯಸ್ಥ ಅಕ್ರಮ್ ಖಾನ್, ಬಿಸಿಸಿಐ ಕೋಲ್ಕತ್ತಾದಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಅಹರ್ನಿಶಿಯಾಗಿ ಆಯೋಜಿಸಲು ಮನವಿ ಮಾಡಿಕೊಂಡಿದೆ. ನಾವು ಈ ಬಗ್ಗೆ ಆಲೋಚಿಸುತ್ತಿದ್ದು, ಶೀಘ್ರದಲ್ಲೇ ಉತ್ತರಿಸುವುದಾಗಿ ಹೇಳಿದ್ದಾರೆ.
ಹೊನಲು-ಬೆಳಕಿನ ಟೆಸ್ಟ್ ಪಂದ್ಯಕ್ಕೆ ಕೊಹ್ಲಿ ಗ್ರೀನ್ ಸಿಗ್ನಲ್!
ಗುರುವಾರದಂದು ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿಯನ್ನು ಭೇಟಿ ಮಾಡಿದ್ದ ನಾಯಕ ಕೊಹ್ಲಿ ಅಹರ್ನಿಶಿ ಟೆಸ್ಟ್ ಪಂದ್ಯಕ್ಕೆ ಸಮ್ಮತಿ ಸೂಚಿಸಿದ್ದರು. ಈ ಬಗ್ಗೆ ಸ್ವತಃ ಗಂಗೂಲಿ ಸ್ಪಷ್ಟೀಕರಣ ನೀಡಿದ್ದರು.