ಮುಂಬೈ: ಕೊರೊನಾ ವೈರಸ್ ಭೀತಿಯಿಂದ ಹಲವಾರು ಕ್ರಿಕೆಟ್ ಟೂರ್ನಿಗಳು ರದ್ದಾಗಿವೆ. ಬಿಸಿಸಿಐ ಸಾವಿರಾರು ಕೋಟಿ ನಷ್ಟ ಅನುಭವಿಸಿದೆ. ಹೀಗಿರುವಾಗಿ ಆಟಗಾರರ ಗುತ್ತಿಗೆ ವೇತನವನ್ನು ಕಡಿತಗೊಳಿಸಲಾಗುತ್ತದೆ ಎಂಬ ಗಾಸಿಪ್ಗೆ ಬಿಸಿಸಿಐ ತೆರೆ ಎಳೆದಿದೆ.
ಐಪಿಎಲ್ ಸೇರಿ ಹಲವು ದ್ವಿಪಕ್ಷೀಯ ಸರಣಿ ರದ್ದಾಗಿರುವುದರಿಂದ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಸಾವಿರಾರು ಕೋಟಿ ಕಳೆದುಕೊಂಡಿದೆ. ಈ ಹಿನ್ನೆಲೆ ನಷ್ಟ ಪರಿಹಾರಕ್ಕಾಗಿ ಆಟಗಾರರ ವೇತನಕ್ಕೆ ಕತ್ತರಿ ಹಾಕಲಾಗುತ್ತದೆ ಎಂಬ ವರದಿಯನ್ನು ಬಿಸಿಸಿಐ ಖಜಾಂಚಿ ಅರುಣ್ ದುಮಾಲ್ ತಳ್ಳಿ ಹಾಕಿದ್ದಾರೆ.
ಮಂಚೂಣಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಈವರೆಗೂ ವೇತನ ಕಡಿತದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಆಟಗಾರರ ವೇತನವನ್ನ ಕಡಿತಗೊಳಿಸುವ ಯೋಚನೆ ಬೋರ್ಡ್ನಲ್ಲಿರುವ ಯಾರ ತಲೆಯಲ್ಲೂ ಇಲ್ಲ ಎಂದೂ ಸ್ಪಪಡಿಸಿದ್ದಾರೆ.
ನಾವು ಇದರ ಬಗ್ಗೆ ಏನೂ ಮಾತನಾಡುವುದಿಲ್ಲ. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಮೇಲೆ ಏನೂ ಮಾಡಬೇಕೆಂಬುದರ ಬಗ್ಗೆ ಆಲೋಚನೆ ಮಾಡಲಿದ್ದೇವೆ. ಎಲ್ಲಾ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನ್ಯಾಯಯುತ ನಿರ್ಧಾರವನ್ನು ತೆಗದುಕೊಳ್ಳಲಿದ್ದೇವೆ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೂ ಯೋಚಿಸುವ ಅಗತ್ಯವಿದೆ. ಕೊರೊನಾದಿಂದ ಭಾರಿ ಹಿನ್ನೆಡೆಯಾಗಿರುವುದು ನಿಜ. ಆದರೆ, ನಾವು ಯಾರ ಮೇಲೂ ಪರಿಣಾಮ ಬೀರದಂತೆ ಸಮಸ್ಯೆ ಬಗೆಹರಿಸಿಕೊಳ್ಳಲು ಚರ್ಚೆ ನಡೆಸುತ್ತೇವೆ ಎಂದು ದುಮಾಲ್ ತಿಳಿಸಿದ್ದಾರೆ.
ಏಪ್ರಿಲ್ 15ರವರೆಗೂ ಐಪಿಎಲ್ ಮುಂದೂಡಲ್ಪಟ್ಟಿದೆ. ಪರಿಸ್ಥಿತಿ ತಿಳಿಯಾದರೆ ಮಾತ್ರ ಬಿಸಿಸಿಐ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.