ಅಹ್ಮದಾಬಾದ್: ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ ಟಿ20 ಕ್ರಿಕೆಟ್ನಲ್ಲಿ ಬ್ಯಾಟಿಂಗ್ ಶೈಲಿ ಬದಲಾಯಿಸಿಕೊಳ್ಳುವುದನ್ನು ನಾನು ಎಂದಿಗೂ ಬಯಸುವುದಿಲ್ಲ ಎಂದು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ತಿಳಿಸಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟಿ20 ಸರಣಿಗೂ ಮುನ್ನ ರಾಥೋರ್ ಈ ಹೇಳಿಕೆ ನೀಡಿದ್ದಾರೆ. ಶುಕ್ರವಾರದಿಂದ ಈ ಸರಣಿ ಆರಂಭವಾಗಲಿದ್ದು, ಎಲ್ಲಾ ಪಂದ್ಯಗಳು ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿವೆ.
ಇಂಗ್ಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರೋಹಿತ್ ಭಾರತದ ಪರ ಗರಿಷ್ಠ ರನ್ ಗಳಿಸಿದ ಆಟಗಾರನಾಗಿದ್ದಾರೆ. ರೋಹಿತ್ ಯಾವುದೇ ಮಾದರಿಯ ಕ್ರಿಕೆಟ್ನಲ್ಲಾದರೂ ತಮ್ಮ ಗೇಮ್ ಪ್ಲಾನ್ಗೆ ತಕ್ಕಂತೆ ಆಡುತ್ತಾರೆ, ಹಾಗಾಗಿ ಅವರ ಬ್ಯಾಟಿಂಗ್ ಶೈಲಿಯಲ್ಲಿ ಯಾವುದೇ ಬದಲಾವಣೆಯನ್ನು ನಾನು ಬಯಸುವುದಿಲ್ಲ ಎಂದು ರಾಥೋರ್ ತಿಳಿಸಿದ್ದಾರೆ.
"ರೋಹಿತ್ರಂತಹ ಯಾವುದೇ ಆಟಗಾರರು ತಮ್ಮದೇ ಆದ ಗೇಮ್ ಪ್ಲಾನ್ ಹೊಂದಿರುತ್ತಾರೆ ಹಾಗೂ ಆ ಯೋಜನೆಯನ್ನು ಅನುಸರಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಆದ್ದರಿಂದ ಅವರ ಯೋಜನೆಯನ್ನು ಬದಲಾಯಿಸಬೇಕೇಂದು ನಾನು ಖಂಡಿತ ಬಯಸಿಲ್ಲ. ಅವರು ಮೊದಲು ಸ್ವಲ್ಪ ಸಮಯ ತೆಗೆದುಕೊಂಡು, ನಂತರ ದೊಡ್ಡ ಮೊತ್ತಗಳಿಸಲು ಮುಂದಾಗುತ್ತಾರೆ. ಅದು ನಮಗೆ ಸಾಕಷ್ಟು ಅನುಕೂಲವಾಗಿದೆ. ಅದು ಅವರಿಗೂ ಉತ್ತಮವಾಗಿ ಕೆಲಸ ಮಾಡಿದೆ. ಹಾಗಾಗಿ ಅದನ್ನು ಈ ಸಮಯದಲ್ಲಿ ಬದಲಿಸಿ ಎಂದು ಹೇಳಲು ನನ್ನಲ್ಲಿ ಯಾವುದೇ ಕಾರಣಗಳಿಲ್ಲ" ಎಂದು ರಾಥೋರ್ ಮುಂಚೂಣಿ ಕ್ರೀಡಾ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ರಿಷಭ್ ಪಂತ್ ಟಿ20 ತಂಡಕ್ಕೆ ಕಮ್ಬ್ಯಾಕ್ ಮಾಡಿರುವುದರಿಂದ ರಾಹುಲ್ ಜವಾಬ್ದಾರಿಯೇನು ಎಂದು ಕೇಳಿದ್ದಕ್ಕೆ ರಾಥೋರ್, "ಕೆಎಲ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಅವರೊಬ್ಬ ಸೂಪರ್ ಕ್ರಿಕೆಟರ್, ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುತ್ತಾರೆ, ಕೀಪಿಂಗ್ನಲ್ಲೂ ಅವರ ಕಾರ್ಯ ಅದ್ಭುತವಾಗಿದೆ. ಈಗ ರಿಷಭ್ ಒಳ್ಳೆಯ ಫಾರ್ಮ್ನಲ್ಲಿದ್ದು, ತಂಡಕ್ಕೆ ಮರಳಿದ್ದಾರೆ. ಹಾಗಾಗಿ ಇದು ಹೇಗೆ ಹೋಗಲಿದೆ ಎಂದು ಕಾದು ನೋಡೋಣ, ಇಂತಹ ಪರಿಸ್ಥಿತಿ ಬಂದಾಗ ಟೀಮ್ ಮ್ಯಾನೇಜಮೆಂಟ್ ಏನನ್ನು ಎದುರು ನೋಡುತ್ತಿದೆ ಎಂಬುದು ಪಂದ್ಯದ ದಿನ ಗೊತ್ತಾಗಲಿದೆ" ಎಂದಿದ್ದಾರೆ.