ಲಾರ್ಡ್ಸ್: ಐಸಿಸಿ ಏಕದಿನ ವಿಶ್ವಕಪ್ನಲ್ಲಿ ನಾಳೆ ಬಲಿಷ್ಠ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಎರಡು ತಂಡಗಳಿಂದ ಸಮಬಲದ ಹೋರಾಟ ಮೂಡಿ ಬರುವ ಸಾಧ್ಯತೆ ದಟ್ಟವಾಗಿದೆ.
ಇದರ ಮಧ್ಯೆ ಬಲಿಷ್ಠ ಬೌಲಿಂಗ್ ಪಡೆ ಹೊಂದಿರುವ ಆಸ್ಟ್ರೇಲಿಯಾ ಮೇಲೆ ಸವಾರಿ ಮಾಡಲು ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಸಜ್ಜಾಗಿದ್ದು, ನೆಟ್ನಲ್ಲಿ ಅದಕ್ಕಾಗಿ ಹೆಚ್ಚಿನ ಸಮಯ ವ್ಯಯ ಮಾಡಿದರು. ವಿಶೇಷವಾಗಿ ಟೀಂ ಇಂಡಿಯಾ ಬ್ಯಾಟಿಂಗ್ ದಿಗ್ಗಜರಾಗಿದ್ದ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಇಂಗ್ಲೆಂಡ್ ಆಟಗಾರರಿಗೆ ಬೌಲಿಂಗ್ ಮಾಡಿದರು. ಆಂಗ್ಲ ತಂಡದ ಎಲ್ಲ ಬ್ಯಾಟ್ಸ್ಮನ್ಗಳು ಅರ್ಜುನ್ ತೆಂಡೂಲ್ಕರ್ ಬೌಲಿಂಗ್ ಎದುರಿಸಿದ್ದು ವಿಶೇಷವಾಗಿತ್ತು.ಅಂದಹಾಗೇ ಅರ್ಜುನ್ ಎಡಗೈ ವೇಗಿಯಾಗಿದ್ದು, ಇನ್ ಸ್ವೀಂಗ್ ಮಾಡುವ ಕೌಶಲ್ಯ ಹೊಂದಿದ್ದಾರೆ. ಈಗಾಗಲೇ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವೆ ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್ ಸರಣಿಗೂ ಮುನ್ನ ನೆಟ್ ಅಭ್ಯಾಸ ನಿರತ ಇಂಗ್ಲೆಂಡಿನ ಬ್ಯಾಟ್ಸ್ ಮನ್ಗಳಿಗೆ ಬೌಲ್ ಮಾಡುವ ಅವಕಾಶವನ್ನು ಅರ್ಜುನ್ ಪಡೆದಿದ್ದರು.
ಜತೆಗೆ ಈ ಹಿಂದೆ ಕ್ರಿಕೆಟ್ ಕಾಶಿ ಲಾರ್ಡ್ಸ್ನಲ್ಲಿ ಆತಿಥೇಯ ಇಂಗ್ಲೆಂಡ್ ಹಾಗೂ ಟೀಂ ಇಂಡಿಯಾ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದಾಗ ಕೊಹ್ಲಿ ಪಡೆಯ ಎಲ್ಲ ಬ್ಯಾಟ್ಸ್ಮನ್ಗಳಿಗೆ ಅರ್ಜುನ್ ತೆಂಡೂಲ್ಕರ್ ನೆಟ್ನಲ್ಲಿ ಬೌಲಿಂಗ್ ಮಾಡಿದ್ದರು. ಕಳೆದ ಕೆಲ ವರ್ಷಗಳಿಂದ ಅರ್ಜುನ್ ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ ಎಂಬುದು ಗಮನಾರ್ಹ.
ಐಸಿಸಿ ವಿಶ್ವಕಪ್ನ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ 10 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ 8 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ನಾಳೆಯ ಪಂದ್ಯ ಇಂಗ್ಲೆಂಡ್ಗೆ ಮಹತ್ವದಾಗಿದೆ.