ಹೈದರಾಬಾದ್: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಸ್ಟಾರ್ ಪ್ಲೇಯರ್ಸ್ ಹೊರಗುಳಿಯುತ್ತಿದ್ದು, ಈಗಾಗಲೇ ಲಸಿತ್ ಮಲಿಂಗಾ, ಕೇನ್ ರಿಚರ್ಡ್ಸನ್ ಸೇರಿದಂತೆ ಕೆಲ ಆಟಗಾರರು ಹೊರಬಿದ್ದಿದ್ದಾರೆ.
ಇದರ ಮಧ್ಯೆ ಇದೀಗ ಸಿಎಸ್ಕೆ ತಂಡದ ಮತ್ತೋರ್ವ ಆಟಗಾರ ಟೂರ್ನಿಯಲ್ಲಿ ಭಾಗಿಯಾಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಪಿನ್ನರ್ ಹರ್ಭಜನ್ ಸಿಂಗ್ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾಗಿಯಾಗುವುದು ಅನುಮಾನವಾಗಿದ್ದು, ಇಲ್ಲಿಯವರೆಗೆ ಅವರ ಲಭ್ಯತೆ ಬಗ್ಗೆ ತಂಡದ ಪ್ರಾಂಚೈಸಿ ಯಾವುದೇ ಮಾಹಿತಿ ನೀಡಿಲ್ಲ.
ತಂಡದಲ್ಲಿ ಭಾಗಿಯಾಗಬೇಕಾಗಿದ್ದ ಆಲ್ರೌಂಡರ್ ಸುರೇಶ್ ರೈನಾ ವೈಯಕ್ತಿಕ ಕಾರಣದಿಂದಾಗಿ ಈಗಾಗಲೇ ಭಾರತಕ್ಕೆ ವಾಪಸ್ ಆಗಿದ್ದು, ಇದರ ಮಧ್ಯೆ ಭಜ್ಜಿ ಅಲಭ್ಯತೆ ತಂಡಕ್ಕೆ ಮತ್ತಷ್ಟು ಹೊಡೆತ ನೀಡುವ ಸಾಧ್ಯತೆ ಇದೆ.
ಅನುಭವಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ತಂಡದೊಂದಿಗೆ ದುಬೈಗೆ ಪ್ರಯಾಣ ಮಾಡದೇ ಭಾರತದಲ್ಲೇ ಉಳಿದುಕೊಂಡಿದ್ದರು. ಜೊತೆಗೆ ಚೆನ್ನೈನಲ್ಲಿ ಆಯೋಜನೆ ಮಾಡಿದ್ದ 5 ದಿನಗಳ ಶಿಬಿರದಿಂದಲೂ ಅವರು ಹೊರಗುಳಿದಿದ್ದರು. ಸೆಪ್ಟೆಂಬರ್ 19ರಿಂದ ಟೂರ್ನಿ ಆರಂಭಗೊಳ್ಳಲಿರುವ ಕಾರಣ ಅವರು ತಂಡಕ್ಕೆ ಸೇರಿಕೊಳ್ಳುವುದು ಅನುಮಾನ ಎಂಬ ಮಾಹಿತಿ ಲಭ್ಯವಾಗುತ್ತಿದೆ.
ಸಿಎಸ್ಕೆ ತಂಡದ ಕೆಲ ಪ್ಲೇಯರ್ಸ್ಗಳಲ್ಲಿ ಕೊರೊನಾ ಕಾಣಿಸಿಕೊಂಡಿದ್ದರಿಂದ ತಂಡ ಮತ್ತೊಮ್ಮೆ ಕ್ವಾರಂಟೈನ್ಗೊಳಗಾಗಿತ್ತು. ಇದೀಗ ಅವರ ವರದಿ ನೆಗೆಟಿವ್ ಕಾಣಿಸಿಕೊಂಡಿದ್ದರಿಂದ ಇದೇ ತಿಂಗಳ 4ರಿಂದ ತಂಡ ಅಭ್ಯಾಸದಲ್ಲಿ ಭಾಗಿಯಾಗಲಿದೆ.