ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸೋಲು ಕೋಚ್ ರಾಹುಲ್ ದ್ರಾವಿಡ್ರ ಅಸಮಾಧಾನಕ್ಕೆ ಕಾರಣವಾಗಿದೆ. ಇದು ನಮಗೆ ಭಾರಿ ನಿರಾಶೆ ಉಂಟು ಮಾಡಿದೆ. ಈ ಸೋಲು ಮುಂದಿನ ಸರಣಿಗಳಿಗೆ ಪಾಠವಾಗಬೇಕು. ಇಂಗ್ಲೆಂಡ್ ವಿರುದ್ಧವೇ ನಡೆಯುವ ಏಕದಿನ, ಟಿ20, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ತಂಡದ ಆಟ ಸುಧಾರಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಏಕೈಕ ಟೆಸ್ಟ್ ಪಂದ್ಯದಲ್ಲಿ 3 ದಿನ ಪಾರಮ್ಯ ಮೆರೆದಿದ್ದ ಭಾರತ ನಾಲ್ಕನೇ ದಿನದಲ್ಲಿ ದಿಢೀರ್ ಕುಸಿದು ಪಂದ್ಯವನ್ನೇ ಕೈಚೆಲ್ಲಿತು. ಇದು ಕೋಚ್ ದ್ರಾವಿಡ್ರಿಗೆ ಭಾರಿ ನಿರಾಶೆ ಮೂಡಿಸಿದೆ. ಪಂದ್ಯವನ್ನು ಕೊನೆಯ ದಿನದವರೆಗೂ ನಿಯಂತ್ರಿಸುವ ಛಾತಿ ತಂಡ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
2 ವರ್ಷಗಳಿಂದ ತಂಡ ಟೆಸ್ಟ್ನಲ್ಲಿ ಉತ್ತಮ ಸಾಧನೆ ಮಾಡಿದೆ. ಆದರೆ, ಕಳೆದ ಕೆಲ ತಿಂಗಳಿನಿಂದ ಅದು ಸಾಧ್ಯವಾಗುತ್ತಿಲ್ಲ. ಪಂದ್ಯದಲ್ಲಿ ಉತ್ತಮ ಆರಂಭದ ಹೊರತಾಗಿಯೂ ಕೊನೆಯಲ್ಲಿ ಹಿಡಿತ ಕಳೆದುಕೊಂಡ ಕಾರಣ ಸೋಲು ಕಾಣಬೇಕಾಯಿತು. ಈ ಮನಸ್ಥಿತಿ ಬದಲಾಗಬೇಕು. ಆಟವನ್ನು ಅಂತ್ಯದವರೆಗೂ ತೆಗೆದುಕೊಂಡು ಹೋಗುವ ಸಾಮರ್ಥ್ಯವನ್ನು ಇನ್ನಷ್ಟು ಬೆಳೆಸಿಕೊಳ್ಳಬೇಕಿದೆ ಎಂದರು.
2ನೇ ಇನಿಂಗ್ಸ್ಗೆ ಆಕ್ಷೇಪ: 132 ರನ್ಗಳ ಉತ್ತಮ ಮುನ್ನಡೆ ಪಡೆದ ತಂಡ 2ನೇ ಇನಿಂಗ್ಸ್ನಲ್ಲಿ ಕೇವಲ 254 ರನ್ಗಳಿಗೆ ಔಟಾಗಿ ಬೇಸರ ಮೂಡಿಸಿತು. ಬ್ಯಾಟಿಂಗ್ ಸಂಪೂರ್ಣ ಕೈಕೊಟ್ಟಿತು. ಆಟಗಾರರು ಬ್ಯಾಟಿಂಗ್ ಕಡೆ ಹೆಚ್ಚು ಗಮನ ಹರಿಸಬೇಕಿದೆ ಎಂದು ದ್ರಾವಿಡ್ ಹೇಳಿದ್ದಾರೆ.
ಪಂದ್ಯದಲ್ಲಿ ಭಾರತ ಮೊದಲ ಇನಿಂಗ್ಸ್ನಲ್ಲಿ ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾರ ಶತಕದ ನೆರವಿನಿಂದ 416 ರನ್ ಗಳಿಸಿತ್ತು. ಇಂಗ್ಲೆಂಡ್ ಜಾನಿ ಬೈರ್ಸ್ಟೋವ್ ಶತಕದೊಂದಿಗೆ 284 ರನ್ಗಳಿಗೆ ಆಲೌಟ್ ಆಗಿ, ಭಾರತಕ್ಕೆ 132 ರನ್ ಮುನ್ನಡೆ ಬಿಟ್ಟುಕೊಟ್ಟಿತ್ತು. 2ನೇ ಇನಿಂಗ್ಸ್ನಲ್ಲಿ ಭಾರತ ಕೇಲ 245 ರನ್ಗೆ ಕುಸಿದು 378 ರನ್ಗಳ ಟಾರ್ಗೆಟ್ ನೀಡಿತ್ತು. ಮತ್ತೊಮ್ಮೆ ಗುಡುಗಿದ ಜಾನಿ ಬೈರ್ಸ್ಟೋವ್ ಮತ್ತು ಜೋ ರೂಟ್ರ ಭರ್ಜರಿ ಶತಕದಾಟ ಇಂಗ್ಲೆಂಡ್ ತಂಡವನ್ನು ಗೆಲುವಿನ ಗಡಿ ತಲುಪಿಸಿತು.
ಇದನ್ನೂ ಓದಿ: ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೂ ರೋಹಿತ್, ವಿರಾಟ್, ಪಂತ್ ಸೇರಿ ಹಿರಿಯ ಪ್ಲೇಯರ್ಸ್ಗೆ ವಿಶ್ರಾಂತಿ!?