ಮುಂಬೈ: ಭಾರತ ತಂಡದ ಹಿರಿಯ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಮಾಡಿದ್ದ ಗಂಭೀರ ಆರೋಪದ ಕುರಿತು ತನಿಖಾ ಸಮಿತಿ ಸಲ್ಲಿಸಿದ ವರದಿಯನ್ನು ಶನಿವಾರ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಪರಿಶೀಲಿಸಲಾಗಿದ್ದು, ಹಿರಿಯ ಕ್ರೀಡಾ ಪತ್ರಕರ್ತ ಬೋರಿಯಾ ಮಜುಂದಾರ್ ಅವರನ್ನು ಬಿಸಿಸಿಐ ಎರಡು ವರ್ಷಗಳ ನಿಷೇಧಿಸುವ ಶಿಕ್ಷೆ ವಿಧಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
"ಬೋರಿಯಾ ಅವರನ್ನು ಕ್ರೀಡಾಂಗಣಕ್ಕೆ ಬಿಡದಂತೆ ನಾವು ಎಲ್ಲಾ ರಾಜ್ಯ ಕ್ರಿಕೆಟ್ ಮಂಡಳಿಗಳಿಗೆ ಆದೇಶ ನೀಡುತ್ತೇವೆ. ನಾವು ಅವರಿಗೆ ದೇಶದಲ್ಲಿ ನಡೆಯುವ ಪಂದ್ಯಗಳಿಗೆ ಮಾಧ್ಯಮ ಮಾನ್ಯತೆ ನೀಡಬಾರದೆಂದು ಕ್ರಮ ಕೈಗೊಂಡಿದ್ದೇವೆ. ಆತನನ್ನು ಕಪ್ಪುಪಟ್ಟಿಗೆ ಸೇರಿಸಲು ನಾವು ಐಸಿಸಿಗೂ ಕೂಡ ಪತ್ರ ಬರೆದಿದ್ದೇವೆ. ಆತನೊಂದಿಗೆ ಯಾವುದೇ ಸಂಬಂಧ ಇಟ್ಟುಕೊಳ್ಳಬಾರದೆಂದು ಆಟಗಾರರಿಗೂ ಸೂಚನೆ ನೀಡಿದ್ದೇವೆ" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಫೆಬ್ರವರಿಯಲ್ಲಿ ಸಂದರ್ಶನ ನೀಡುವುದಕ್ಕೆ ಒಪ್ಪದ ಕಾರಣ ಬೋರಿಯಾ ಮಜುಂದಾರ್ ತಮಗೆ ಭವಿಷ್ಯದಲ್ಲಿ ತೊಂದರೆ ಕೊಡುವ ಅರ್ಥದಲ್ಲಿ ಬೆದರಿಕೆ ಹಾಕಿರುವ ಕೆಲವು ವಾಟ್ಸಪ್ ಸಂದೇಶಗಳನ್ನು ಸಹಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ದೇಶದಲ್ಲಿ ಭಾರಿ ಸದ್ದು ಮಾಡಿ ಬಹುತೇಕ ಮಾಜಿ ಕ್ರಿಕೆಟಿಗರೆಲ್ಲರೂ ಟೀಕಿಸಿದ್ದರು.
ಕೆಲವು ದಿನಗಳ ನಂತರ ಬೋರಿಯಾ ಕೂಡ, ಸಹಾ ಅವರು ನಾನು ಮಾಡಿರುವ ವಾಟ್ಸಪ್ ಸಂದೇಶಗಳನ್ನು ತಿದ್ದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಇದರಿಂದ ವಿವಾದ ಮತ್ತಷ್ಟು ದೊಡ್ಡದಾಗಿತ್ತು. ಈ ಕಾರಣದಿಂದ ಬಿಸಿಸಿಐ ಮಂಡಳಿಯ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಖಜಾಂಚಿ ಅರುಣ್ ಧುಮಾಲ್, ಅಪೆಕ್ಸ್ ಕೌನ್ಸಿಲ್ ಸದಸ್ಯ ಪ್ರಭುತೇಜ್ ಭಾಟಿಯಾ ಅವರುಳ್ಳ ಸಮಿತಿ ನೇಮಿಸಿ ವಿಚಾರಣೆ ನಡೆಸಲು ತಿಳಿಸಿತ್ತು. ಇದೀಗ ಈ ಸಮಿತಿ ಸಲ್ಲಿಸಿರುವ ವರದಿಯನ್ನು ಪರಿಶೀಲಿಸಿ ಶನಿವಾರ ನಡೆದ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಬೋರಿಯಾ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:8ನೇ ಬಾರಿ 100ರೊಳಗೆ ಬೆಂಗಳೂರು ಆಲೌಟ್, ಆರ್ಸಿಬಿಗಿಂತಲೂ ಕಳಪೆ ದಾಖಲೆ ಹೊಂದಿದ ತಂಡಗಳಿವು..