ಲಂಡನ್: ದಕ್ಷಿಣ ಆಫ್ರಿಕಾ ವಿರುದ್ಧ ಮುಂಬರುವ ಟಿ - 20 ಸರಣಿಗೆ ಇಂಗ್ಲೆಂಡ್ ತಂಡದ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ಗೆ ವಿಶ್ರಾಂತಿ ನೀಡಲಾಗಿದೆ. ಕೆಲಸದ ಹೊರೆ ಮತ್ತು ಫಿಟ್‌ನೆಸ್ ನಿರ್ವಹಣೆ ಸಲುವಾಗಿ ಸ್ಟೋಕ್ಸ್ರನ್ನು ತಂಡಕ್ಕೆ ಆಯ್ಕೆ ಮಾಡಿಲ್ಲ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಖಚಿತಪಡಿಸಿದೆ.
ಮುಂದಿನ ವಾರ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾಗಲಿರುವ ಮೂರು ಏಕದಿನ ಮತ್ತು ಮೂರು ಟಿ-20ಗಳಿಗೆ ಇಂಗ್ಲೆಂಡ್ ಪುರುಷರ ತಂಡ ಪ್ರಕಟಿಸಲಾಗಿದೆ. ಏಕದಿನ ತಂಡಕ್ಕೆ ಮಾತ್ರ ಸ್ಟೋಕ್ಸ್ರನ್ನು ಪರಿಗಣಿಸಲಾಗಿದೆ. ಸತತ 4 ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ನಿರ್ವಹಿಸಿದ ಬಳಿಕ ಭಾರತದ ವಿರುದ್ಧದ ಟಿ-20 ಸರಣಿಗೂ ಆಲ್‌ರೌಂಡರ್ ವಿಶ್ರಾಂತಿ ಪಡೆದಿದ್ದರು.
ಇನ್ನುಳಿದಂತೆ, ಮೆಕ್ಕಾಗೆ ಹಜ್ ಯಾತ್ರೆ ಹಿನ್ನೆಲೆಯಲ್ಲಿ ಭಾರತದ ವಿರುದ್ಧದ ಸರಣಿಯಿಂದ ಹೊರಗಿದ್ದ ಸ್ಪಿನ್ನರ್ ಆದಿಲ್ ರಶೀದ್ ಎರಡೂ ಮಾದರಿಯ ತಂಡಕ್ಕೂ ಮರಳಿದ್ದಾರೆ. ಜಾನಿ ಬೈರ್‌ಸ್ಟೋವ್ ಟಿ-20 ತಂಡದಲ್ಲಿಯೂ ಸ್ಥಾನ ಪಡೆದಿದ್ದು, ವೇಗಿ ಮ್ಯಾಥ್ಯೂ ಪಾಟ್ಸ್ ಏಕದಿನ ತಂಡದಲ್ಲಿ ಚೊಚ್ಚಲ ಅವಕಾಶ ಪಡೆದಿದ್ದಾರೆ.
ಜುಲೈ 19ರಂದು ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ದಕ್ಷಿಣ ಆಫ್ರಿಕಾದ ಇಂಗ್ಲೆಂಡ್ ಪ್ರವಾಸ ಆರಂಭವಾಗಲಿದ್ದು, ಬಳಿಕ ತಲಾ ಮೂರು ಟಿ-20 ಹಾಗೂ ಟೆಸ್ಟ್ ಪಂದ್ಯಗಳು ಸೆಪ್ಟೆಂಬರ್ 12ರವರೆಗೆ ನಡೆಯಲಿವೆ.
ಏಕದಿನ ತಂಡ: ಜೋಸ್ ಬಟ್ಲರ್ (ಸಿ), ಮೊಯಿನ್ ಅಲಿ, ಜಾನಿ ಬೈರ್‌ಸ್ಟೋವ್, ಬ್ರೈಡನ್ ಕಾರ್ಸ್, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್, ಕ್ರೇಗ್ ಓವರ್‌ಟನ್, ಮ್ಯಾಥ್ಯೂ ಪಾಟ್ಸ್, ಆದಿಲ್ ರಶೀದ್, ಜೋ ರೂಟ್, ಜೇಸನ್ ರಾಯ್, ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ
ಟಿ-20 ತಂಡ: ಜೋಸ್ ಬಟ್ಲರ್ (ಸಿ), ಮೊಯಿನ್ ಅಲಿ, ಜಾನಿ ಬೈರ್‌ಸ್ಟೋವ್, ಹ್ಯಾರಿ ಬ್ರೂಕ್, ಸ್ಯಾಮ್ ಕರನ್, ರಿಚರ್ಡ್ ಗ್ಲೀಸನ್, ಕ್ರಿಸ್ ಜೋರ್ಡನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲನ್, ಆದಿಲ್ ರಶೀದ್, ಜೇಸನ್ ರಾಯ್, ಫಿಲ್ ಸಾಲ್ಟ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ
ಇದನ್ನೂ ಓದಿ: ತಾಯಿಯಾದ ಮಾಜಿ ಟೆನಿಸ್ ಚೆಲುವೆ ಮರಿಯಾ ಶರಪೋವಾ.. ಗಂಡು ಮಗುವಿಗೆ ಜನ್ಮ