ಕಟಕ್(ಒಡಿಶಾ): ವಯೋಮಿತಿ ವಂಚನೆ ಆರೋಪದ ಹಿನ್ನೆಲೆಯಲ್ಲಿ ಒಡಿಶಾ ಕ್ರಿಕೆಟಿಗ ಸುಮಿತ್ ಶರ್ಮಾ ಎಂಬವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಎರಡು ವರ್ಷಗಳ ಕಾಲ ನಿಷೇಧ ಶಿಕ್ಷೆ ವಿಧಿಸಿದೆ. ಶರ್ಮಾ ಇತ್ತೀಚೆಗೆ ಒಡಿಶಾ ರಣಜಿ ತಂಡಕ್ಕೆ ಆಯ್ಕೆ ಆಗಿದ್ದರು. ಆದರೆ, ವಯೋಮಿತಿ ವಂಚನೆ ಆರೋಪ ಕೇಳಿ ಬರುತ್ತಿದ್ದಂತೆ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ತಂಡ ಸೇರಲು ಸುಮಿತ್ ಶರ್ಮಾ ಈ ಹಿಂದೆ ತಮ್ಮ ವಯೋಮಿತಿಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಸಲ್ಲಿಸಿದ್ದರು. ಬಿಸಿಸಿಐ ದಾಖಲೆಗಳನ್ನು ಪರಿಶೀಲಿಸಿದ್ದು ವಯಸ್ಸಿನ ವ್ಯತ್ಯಾಸ ಕಂಡು ಬಂದಿತ್ತು.
ಶರ್ಮಾ ಮೊದಲ ರಣಜಿ ಟ್ರೋಫಿ ಪಂದ್ಯ ಆಡಲು ತಮ್ಮ ತಂಡದೊಂದಿಗೆ ಇತ್ತೀಗಷ್ಟೇ ಬರೋಡಾಗೆ ಪ್ರಯಾಣ ಬೆಳೆಸಿದ್ದರು. ಆದರೆ, ಪಂದ್ಯಕ್ಕೂ ಮುನ್ನ, ಬಿಸಿಸಿಐ ಶಿಸ್ತು ಸಮಿತಿಯು ಈ ನಿರ್ಧಾರ ಪ್ರಕಟಿಸಿದೆ. ಸದ್ಯ ಒಡಿಶಾ ತಂಡವು ಸುಮಿತ್ ಶರ್ಮಾ ಬದಲಿಗೆ ತಾರಿಣಿ ಸಾ ಅವರನ್ನು ಕಣಕ್ಕಿಸಿದೆ.
ಶರ್ಮಾ 2015-16ನೇ ಸಾಲಿನಲ್ಲಿ ಜೂನಿಯರ್ ಮಟ್ಟದಲ್ಲಿ ಆಡಿದ ಜನನ ಪ್ರಮಾಣಪತ್ರವು ಪ್ರಸಕ್ತ ಋತುವಿನಲ್ಲಿ ಅವರು ಸಲ್ಲಿಸಿದ ಜನನ ಪ್ರಮಾಣಪತ್ರಕ್ಕೆ ಹೊಂದಿಕೆಯಾಗುತ್ತಿಲ್ಲ. ಬೇರೆ ಬೇರೆ ವಯಸ್ಸಿನ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದಕ್ಕಾಗಿ ಶಿಸ್ತು ಸಮಿತಿ ಶರ್ಮಾ ವಿರುದ್ಧ ಈ ಕ್ರಮ ಕೈಗೊಂಡಿದೆ.
2023-2024ರ ರಣಜಿ ಟ್ರೋಫಿ ಇಂದಿನಿಂದ ಆರಂಭಗೊಂಡಿದ್ದು, ಪ್ರಶಸ್ತಿಗಾಗಿ ಪೈಪೋಟಿ ನಡೆಯುತ್ತಿದೆ. ಈ ಋತುವಿನಲ್ಲಿ ಒಡಿಶಾ ಒಟ್ಟು 7 ಪಂದ್ಯಗಳನ್ನು ಆಡಲಿದೆ. ಮೊದಲ ಪಂದ್ಯವನ್ನು ಬರೋಡಾ ವಿರುದ್ಧ ಕಣಕ್ಕಿಳಿಯುವ ಒಡಿಶಾ, ನಂತರ ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಪಾಂಡಿಚೇರಿ, ಉತ್ತರಾಖಂಡ ಮತ್ತು ದೆಹಲಿ ತಂಡಗಳನ್ನು ಎದುರಿಸಲಿದೆ.
ಇದನ್ನೂ ಓದಿ: ಕೇಪ್ ಟೌನ್‌ನಲ್ಲಿ ಐತಿಹಾಸಿಕ ಗೆಲುವು: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಗ್ರಸ್ಥಾನಕ್ಕೇರಿದ ಭಾರತ