ಮುಂಬೈ: 2022ರ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 26ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರನ್ನರ್ ಅಪ್ ಕೋಲ್ಕತ್ತಾ ನೈಟ್ರೈಡರ್ಸ್ ತಂಡಗಳು ಸೆಣಸಾಡಲಿವೆ ಎಂದು ಬಿಸಿಸಿಐ ಭಾನುವಾರ ತಿಳಿಸಿದೆ.
ಐಪಿಎಲ್ನ ಲೀಗ್ ಪಂದ್ಯಗಳು ಸಂಪೂರ್ಣ ಮುಂಬೈ ಮತ್ತು ಪುಣೆಯಲ್ಲಿ ನಡೆಯಲಿವೆ. ಟೂರ್ನಿಯಲ್ಲಿ 70 ಲೀಗ್ ಪಂದ್ಯ ಮತ್ತು 4 ಪ್ಲೇ ಆಫ್ಗಳಿರಲಿದ್ದು, ಮಾರ್ಚ್ 26ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ಮತ್ತು ಮೇ 29ರಂದು ಫೈನಲ್ ಪಂದ್ಯ ಜರುಗಲಿದೆ.
ಮಾರ್ಚ್ 27ರಂದು ಎರಡು ಪಂದ್ಯಗಳಿರಲಿದ್ದು, ಬ್ರಬೋರ್ನ್ ಮೈದಾನದಲ್ಲಿ ಸಾಯಂಕಾಲದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಹಾಗೂ ರಾತ್ರಿ ಪಂದ್ಯ ಡಿವೈ ಪಾಟೀಲ್ ಮೈದಾನದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ ಎಂದು ಹೇಳಿಕೆಯಲ್ಲಿ ಬಿಸಿಸಿಐ ತಿಳಿಸಿದೆ.
2022ರ ಐಪಿಎಲ್ ಟೂರ್ನಿಯ ಎಲ್ಲಾ ಲೀಗ್ ಪಂದ್ಯಗಳು ಮಹಾರಾಷ್ಟ್ರದಲ್ಲೇ ನಡೆಯಲಿವೆ. ಮುಂಬೈನ ವಾಂಖೆಡೆ ಮತ್ತು ಡಿ.ವೈ ಪಾಟಿಲ್ ಕ್ರೀಡಾಂಗಣದಲ್ಲಿ ತಲಾ 20 , ಬ್ರಬೋರ್ನ್ ಸ್ಟೇಡಿಯಂ ಮತ್ತು ಪುಣೆಯ ಎಂಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ತಲಾ 15 ಪಂದ್ಯಗಳು ನಡೆಯಲಿವೆ.
ಟೂರ್ನಿಯಲ್ಲಿ 12 ದಿನ ಎರಡು ಪಂದ್ಯಗಳು ನಡೆಯಲಿವೆ. ಮಧ್ಯಾಹ್ನ 3:30ಕ್ಕೆ ಮತ್ತು ರಾತ್ರು 7:30ಕ್ಕೆ ಪಂದ್ಯ ಆರಂಭವಾಗಲಿವೆ. ಕೊನೆಯ ಲೀಗ್ ಪಂದ್ಯ ಸನ್ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಮೇ 22ರಂದು ವಾಂಖೆಡೆ ಸ್ಟೇಡಿಯಂನಲ್ಲಿ ಜರುಗಲಿದೆ. ಆದರೆ ನೌಕೌಟ್ ಪಂದ್ಯಗಳ ವೇಳಾಪಟ್ಟಿಯನ್ನು ನಂತರ ಘೋಷಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.
ಐಪಿಎಲ್ ವೇಳಾಪಟ್ಟಿಗೆ ಇಲ್ಲಿ ಕ್ಲಿಕ್ ಮಾಡಿ: ಐಪಿಎಲ್ ವೇಳಾಪಟ್ಟಿ2022
ಇದನ್ನೂ ಓದಿ:ಶ್ರೀ'ಲಂಕಾ ದಹನ' ಮಾಡಿದ ಜಡೇಜಾ: ಭಾರತಕ್ಕೆ ಇನ್ನಿಂಗ್ಸ್ ಮತ್ತು 222 ರನ್ಗಳ ಜಯ