ಪಲ್ಲಕೆಲೆ (ಶ್ರೀಲಂಕಾ): ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ನೇಪಾಳ ವಿರುದ್ಧ 10 ವಿಕೆಟ್ಗಳಿಂದ ಜಯಭೇರಿ ಬಾರಿಸಿದೆ. ಈ ಜಯದೊಂದಿಗೆ ಟೀಂ ಇಂಡಿಯಾ ಮೂರು ಅಂಕದೊಂದಿಗೆ ಸೂಪರ್ ಫೋರ್ಗೆ ಪ್ರವೇಶಿಸಿದೆ. ಮತ್ತೊಂದೆಡೆ, ಭಾರತದ ವಿರುದ್ಧ ತನ್ನ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಡಿದ ನೇಪಾಳ ತಂಡ ಸೋತು ಟೂರ್ನಿಯಿಂದ ಹೊರ ಬಿದ್ದಿದೆ.
ಶ್ರೀಲಂಕಾದ ಪಲ್ಲಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ದುಕೊಂಡಿತ್ತು. ಇದರಿಂದ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡ 48.2 ಓವರ್‌ಗಳಲ್ಲಿ 230 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ 2.1 ಓವರ್‌ಗಳಲ್ಲಿ 17 ರನ್ ಗಳಿಸಿ ಆಡುತ್ತಿದ್ದರು. ಆದರೆ, ಈ ವೇಳೆ ಪಂದ್ಯಕ್ಕೆ ಮಳೆ ಅಡ್ಡಿ ಉಂಟು ಮಾಡಿತು. ಇದರಿಂದ ಸುಮಾರು ಹೊತ್ತು ಪಂದ್ಯ ಸ್ಥಗಿತಗೊಳಿಸಲಾಯಿತು. ಬಳಿಕ 23 ಓವರ್ಗಳಿಗೆ ಪಂದ್ಯ ಕಡಿತಗೊಳಿಸಿ, ಡಿಎಲ್ಎಸ್ ನಿಯಮದಡಿ ಟೀಂ ಇಂಡಿಯಾಗೆ 145 ರನ್ ಟಾರ್ಗೆಟ್ ನಿಗದಿ ಪಡಿಸಲಾಗಿತು.
ತಮ್ಮ ಬ್ಯಾಟಿಂಗ್ ಪುನಾರಂಭ ಮಾಡಿದ ರೋಹಿತ್ ಹಾಗೂ ಗಿಲ್ ರನ್ ಗಳಿಸಲು ಕೊಂಚ ಸಮಯ ತೆಗೆದುಕೊಂಡರು. ಬಳಿಕ ತಮ್ಮ ಭರ್ಜರಿ ಹೊಡೆತಗಳನ್ನು ಇಬ್ಬರೂ ಆಟಗಾರರು ಆರಂಭಿಸಿದರು. ನೇಪಾಳದ ಬೌಲರ್ಗಳನ್ನು ದಂಡಿಸಿದ ರೋಹಿತ್ ಶರ್ಮಾ ಕೇವಲ 39 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಮತ್ತೊಂದೆಡೆ, ಗಿಲ್ ಸಹ ಉತ್ತಮ ಹೊಡೆತಗಳೊಂದಿಗೆ 47 ಬಾಲ್ಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು.
ಮತ್ತೊಂದೆಡೆ, ನೇಪಾಳದ ವೇಗಿಗಳು ಹಾಗೂ ಸ್ಪಿನರ್ಗಳು ಈ ಜೋಡಿಯನ್ನು ಬೇರ್ಪಡಿಸಲು ತಮ್ಮ ಉತ್ತಮ ಎಸೆತಗಳೊಂದಿಗೆ ಸಾಕಷ್ಟು ಯತ್ನಿಸಿದರು. ಆದರೆ, ಯಾವುದೇ ಒತ್ತಡಕ್ಕೆ ಸಿಲುಕದೇ ರೋಹಿತ್ ಹಾಗೂ ಗಿಲ್ ಬ್ಯಾಟ್ ಬೀಸಿದರು. ಅಂತಿಮವಾಗಿ ರೋಹಿತ್ ಅಜೇಯ 74 ಹಾಗೂ ಗಿಲ್ ಅಜೇಯ 67 ರನ್ ಸಿಡಿಸಿ ತಂಡಕ್ಕೆ ಸುಲಭದ ಗೆಲುವು ತಂದುಕೊಟ್ಟರು. ಇನ್ನೂ 17 ಎಸೆತಗಳು ಬಾಕಿ ಇರುವಂತೆಯೇ ವಿಕೆಟ್ ನಷ್ಟವಿಲ್ಲದೆ ಟೀಂ ಇಂಡಿಯಾ ಜಯ ಸಾಧಿಸಿತು.
ಎ ಗ್ರೂಪ್ನಲ್ಲಿ ಪಾಕಿಸ್ತಾನ ಈಗಾಗಲೇ ಮೂರು ಅಂಕಗಳೊಂದಿಗೆ ಸೂಪರ್ ಫೋರ್ ಹಂತಕ್ಕೆ ತಲುಪಿದೆ. ಈಗ ಟೀಂ ಇಂಡಿಯಾ ಸಹ ಈ ಗೆಲುವಿನೊಂದಿಗೆ ಮೂರು ಅಂಕಗಳನ್ನು ಹೊಂದಿದ್ದು, ಸೂಪರ್ ಫೋರ್ ಹಂತಕ್ಕೆ ಪ್ರವೇಶಿಸಿದೆ.
ಇದನ್ನೂ ಓದಿ: IND vs NEP: ಸದೃಢ ಬ್ಯಾಟಿಂಗ್ ಪ್ರದರ್ಶಿಸಿದ ನೇಪಾಳ.. ಭಾರತಕ್ಕೆ 231 ರನ್ಗಳ ಗುರಿ