ದುಬೈ(ಯುಎಇ): ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ-ಪಾಕಿಸ್ತಾನ ನಡುವಿನ ಸೂಪರ್ 4 ಹಂತದ ಪಂದ್ಯದಲ್ಲಿ ಬಾಬರ್ ಆಜಂ ಬಳಗ ರೋಚಕ 5 ವಿಕೆಟ್ಗಳ ಗೆಲುವು ದಾಖಲಿಸಿತು. ಈ ಪಂದ್ಯ ಗೆಲ್ಲಲು ಕೊನೆಯವರೆಗೂ ಹೋರಾಡಿದ ರೋಹಿತ್ ಶರ್ಮಾ ಟೀಂ ಕೊನೆಯ ಓವರ್ನಲ್ಲಿ ಪಂದ್ಯ ಕೈಚೆಲ್ಲಿದೆ. ಹೀಗಾಗಿ, ಮುಂದಿನ ಎರಡು ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದೆ.
ಹೈ ವೋಲ್ಟೇಜ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್‌ಗಳನ್ನು ಕಲೆ ಹಾಕಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ರಾಹುಲ್-ರೋಹಿತ್ ಜೋಡಿ ಮೊದಲ ವಿಕೆಟ್ ನಷ್ಟಕ್ಕೆ 54 ರನ್ ಪೇರಿಸಿದರು. 28 ರನ್ಗಳಿಸಿ ಉತ್ತಮವಾಗಿ ಆಡ್ತಿದ್ದ ರೋಹಿತ್ ದೊಡ್ಡ ಹೊಡೆತಕ್ಕೆ ಕೈ ಹಾಕಿ ಹ್ಯಾರಿಸ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಕೆ.ಎಲ್.ರಾಹುಲ್ (28) ಕೂಡ ಶಹ್ಬಾದ್ ಖಾನ್ ಓವರ್ನಲ್ಲಿ ವಿಕೆಟ್ ನೀಡಿದ್ದು ತಂಡಕ್ಕೆ ಮೇಲಿಂದ ಮೇಲೆ ಎರಡು ಆಘಾತ ಎದುರಾಯಿತು.
ನಂತರ ಕ್ರೀಸಿಗೆ ಆಗಮಿಸಿದ ವಿರಾಟ್ ಕೊಹ್ಲಿ ಪಾಕ್ ಬೌಲರ್ಗಳನ್ನು ಸುಲಭವಾಗಿ ಎದುರಿಸಿದರು. ಆದರೆ, ಇನ್ನುಳಿದಂತೆ ಯಾವುದೇ ಭಾರತೀಯ ಆಟಗಾರ ಇವರಿಗೆ ಹೇಳಿಕೊಳ್ಳುವ ಸಾಥ್ ನೀಡಲಿಲ್ಲ. ಹಾಂಗ್ ಕಾಂಗ್ ಪಂದ್ಯದಲ್ಲಿ ಮಿಂಚಿದ್ದ ಸೂರ್ಯಕುಮಾರ್ ಕೇವಲ 10 ರನ್ಗಳಿಸಿ ಔಟಾದರೆ, ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ 14 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಹಾರ್ದಿಕ್ ಪಾಂಡ್ಯ ಶೂನ್ಯಕ್ಕೆ ಔಟಾದರು. ದಿನೇಶ್ ಕಾರ್ತಿಕ್ ಸ್ಥಾನದಲ್ಲಿ ಅವಕಾಶ ಗಿಟ್ಟಿಸಿಕೊಂಡು ಕಣಕ್ಕಿಳಿದಿದ್ದ ಹೂಡಾ 16 ರನ್ಗಳಿಸಿ, ನಸೀಮ್ ಶಾ ಓವರ್ನಲ್ಲಿ ಔಟಾದರು.
1. ಮಿಂಚಿದ ರನ್ ಮಷಿನ್ ಕೊಹ್ಲಿ: ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾದ ವಿಕೆಟ್‌ಗಳು ಉರುಳುತ್ತಿದ್ದಂತೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ, ತಾವೆದುರಿಸಿದ 44 ಎಸೆತಗಳಲ್ಲಿ 1 ಸಿಕ್ಸರ್, 4 ಬೌಂಡರಿಸಮೇತ 60 ರನ್‌ಗಳನ್ನು ಗಳಿಸಿ, ಕೊನೆ ಓವರ್ನಲ್ಲಿ ರನೌಟ್ ಬಲೆಗೆ ಬಿದ್ದರು.
ಪಾಕಿಸ್ತಾನದ ಪರ ಶಹ್ಬಾದ್ ಖಾನ್ 2 ವಿಕೆಟ್ ಪಡೆದರೆ, ನಸೀಮ್ ಶಾ, ಮೊಹಮ್ಮದ್, ಹ್ಯಾರಿಸ್ ರೌಫ್ ಹಾಗೂ ನವಾಜ್ ತಲಾ 1 ವಿಕೆಟ್ ಕಬಳಿಸಿದರು.
182 ರನ್ಗಳ ಗುರಿ ಬೆನ್ನತ್ತಿದ ಪಾಕ್ ಕೂಡ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ವಿಫಲವಾಯಿತು. ಆರಂಭಿಕರಾಗಿ ಕಣಕ್ಕಿಳಿದ ಕ್ಯಾಪ್ಟನ್ ಬಾಬರ್ ಆಜಂ (14) ರವಿ ಬಿಷ್ಣೋಯ್ ಓವರ್ನಲ್ಲಿ ವಿಕೆಟ್ ನೀಡಿ ನಿರ್ಗಮಿಸಿದರು. ಫಖಾರ್ ಜಮಾನ್(15) ಚಹಲ್ ಓವರ್ನಲ್ಲಿ ಔಟಾದರು. ಈ ವೇಳೆ ತಂಡದ ಸ್ಕೋರ್ 63 ಆಗಿತ್ತು.
2. ರಿಜ್ವಾನ್-ನವಾಜ್ ಬ್ಯಾಟಿಂಗ್ ಮೋಡಿ: ಪಾಕ್ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್‌ನಲ್ಲಿ ಒಂದಾದ ರಿಜ್ವಾನ್-ನವಾಜ್ ಜೋಡಿ ತಂಡಕ್ಕೆ ಉತ್ತಮ ಬುನಾದಿ ಹಾಕಿದರು. ಮುರಿಯದ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡದತ್ತ ತೆಗೆದುಕೊಂಡು ಹೋದರು. ನವಾಜ್ ತಾವು ಎದುರಿಸಿದ 20 ಎಸೆತಗಳಲ್ಲಿ 2 ಸಿಕ್ಸರ್, 6 ಬೌಂಡರಿ ಸಮೇತ 42 ರನ್ ಗಳಿಸಿದರೆ, ರಿಜ್ವಾನ್ 51 ಎಸೆತಗಳಲ್ಲಿ 2 ಸಿಕ್ಸರ್, 6 ಬೌಂಡರಿಗಳೊಂದಿಗೆ 71 ರನ್‌ಗಳನ್ನು ಸಿಡಿಸಿದರು. ಅಂತಿಮವಾಗಿ ಇವರ ವಿಕೆಟ್ ಉರುಳಿಸುವಲ್ಲಿ ಭುವಿ ಹಾಗೂ ಹಾರ್ದಿಕ್ ಯಶಸ್ವಿಯಾದರು.
3. ಆಸಿಫ್ ಕ್ಯಾಚ್ ಬಿಟ್ಟು ಕೈ ಸುಟ್ಟುಕೊಂಡ ಭಾರತ: ಉತ್ತಮವಾಗಿ ಆಡ್ತಿದ್ದ ರಿಜ್ವಾನ್ ಹಾಗೂ ನವಾಜ್ ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಭಾರತ 18ನೇ ಓವರ್ನಲ್ಲಿ ಅರ್ಷ್‌ದೀಪ್ ಸಿಂಗ್ ಸುಲಭವಾಗಿ ಕೈಚೆಲ್ಲಿದ ಆಸಿಫ್ ಕ್ಯಾಚ್ ಭಾರತಕ್ಕೆ ಮುಳುವಾಯಿತು. ಜೀವದಾನ ಪಡೆದುಕೊಂಡು ಮಿಂಚಿದ ಆಸಿಫ್ ತಂಡವನ್ನು ಸುಲಭವಾಗಿ ಗೆಲುವಿನತ್ತ ತೆಗೆದುಕೊಂಡು ಹೋದರು. ಪಾಕ್ ಗೆಲುವಿಗೆ ಕೊನೆಯ ಓವರ್ನಲ್ಲಿ 7 ರನ್ಗಳ ಅವಶ್ಯಕತೆ ಇತ್ತು. ಈ ಸಂದರ್ಭದಲ್ಲಿ ಮೊದಲ ಎಸೆತದಲ್ಲಿ 1 ರನ್, ಎರಡನೇ ಎಸೆತದಲ್ಲಿ ಬೌಂಡರಿ ಸಿಡಿಸಿದ ಆಸಿಫ್, 4ನೇ ಎಸೆತದಲ್ಲಿ ಔಟಾದರು. ಹೀಗಾಗಿ, ಕೊನೆಯ ಎರಡು ಎಸೆತಗಳಲ್ಲಿ ಕೇವಲ 2 ರನ್ ಬೇಕಾಗಿತ್ತು. ಈ ವೇಳೆ ಇಫ್ತಿಕಾರ್ ಆ 2 ರನ್‌ಗಳನ್ನು ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೊನೆಯದಾಗಿ 19.5 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ಗಳಿಸಿದ ಪಾಕ್ ಗೆಲುವಿನ ಕೇಕೆ ಹಾಕಿತು.
ಟೀಂ ಇಂಡಿಯಾ ಪರ ಭುವನೇಶ್ವರ್, ಅರ್ಷ್‌ದೀಪ್ ಸಿಂಗ್, ರವಿ ಬಿಷ್ಣೋಯ್, ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಹಲ್ ತಲಾ 1 ವಿಕೆಟ್ ಪಡೆದುಕೊಂಡರು.
ಇದನ್ನೂ ಓದಿ: ಏಷ್ಯಾ ಕಪ್: ಭಾರತ ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ, ಬೌಲಿಂಗ್ ಆಯ್ಕೆ
4. ಭಾರತದ ವಿರುದ್ಧ ಪಾಕ್ ರನ್ ಚೇಸ್ ದಾಖಲೆ: ಪಾಕಿಸ್ತಾನ ತಂಡ ನಿನ್ನೆಯ ಪಂದ್ಯದಲ್ಲಿ 181 ರನ್ ಚೇಸ್ ಮಾಡಿದ್ದು, ಈ ಮೂಲಕ ಭಾರತದ ವಿರುದ್ಧ ಟಿ20 ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ಹೆಚ್ಚಿನ ರನ್ ಬೆನ್ನಟ್ಟಿ ಗೆದ್ದಿರುವ ಸಾಧನೆಯನ್ನೂ ಮಾಡಿತು.
5. ವಿಶ್ವ ದಾಖಲೆ ಬರೆದ ಬ್ಯಾಟಿಂಗ್ ಕಿಂಗ್ ಕೊಹ್ಲಿ: ಪಾಕಿಸ್ತಾನ ವಿರುದ್ಧ ಕೇವಲ 36 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದ ವಿರಾಟ್ ಹೊಸದೊಂದು ವಿಶ್ವದಾಖಲೆ ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಬಾರಿ 50ಕ್ಕೂ ಹೆಚ್ಚು ರನ್‌ಗಳನ್ನು ಸಂಪಾದಿಸಿದ ಬ್ಯಾಟರ್ ಎಂಬ ದಾಖಲೆಯೀಗ ವಿರಾಟ್ ಕೊಹ್ಲಿ ಪಾಲಾಗಿದೆ. ಈ ಹಿಂದೆ ಕ್ಯಾಪ್ಟನ್ ರೋಹಿತ್ ಶರ್ಮಾ ಹೆಸರಿನಲ್ಲಿ ಈ ದಾಖಲೆ ಇತ್ತು. ರೋಹಿತ್ ಟಿ20 ಕ್ರಿಕೆಟ್ನಲ್ಲಿ 31 ಸಲ 50+ ರನ್ ಕಲೆಹಾಕಿದ್ದರು. ಇದೀಗ ವಿರಾಟ್ ಚುಟುಕು ಕ್ರಿಕೆಟ್ನಲ್ಲಿ 32 ಅರ್ಧಶತಕ ಸಿಡಿಸಿದ್ದಾರೆ.