ಮುಂಬೈ: ವಿರಾಟ್ ಕೊಹ್ಲಿ ಅವರಿಂದ ತೆರವಾಗಲಿರುವ ಭಾರತ ಟಿ20 ಕ್ರಿಕೆಟ್ ತಂಡದ ನಾಯಕತ್ವಕ್ಕೆ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಹೆಸರು ಜೋರಾಗಿ ಕೇಳಿಬರುತ್ತಿದೆ. ಆದರೆ ಮಾಜಿ ವೇಗದ ಬೌಲರ್ ಆಶೀಷ್ ನೆಹ್ರಾ ಭಾರತ ತಂಡದ ಮೂರು ಮಾದರಿಯ ಕ್ರಿಕೆಟ್‌ನ ಅಗ್ರ ಶ್ರೇಯಾಂಕಿತ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಕೊಹ್ಲಿ ಸ್ಥಾನ ತುಂಬಬಲ್ಲರು ಎಂದು ಹೇಳಿದ್ದಾರೆ.
ಕೊಹ್ಲಿ ಟಿ20 ವಿಶ್ವಕಪ್ ನಂತರ ಚುಟುಕು ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿಯುವುದಾಗಿ ಹೇಳಿದ್ದಾರೆ. ಅವರ ಸ್ಥಾನ ತುಂಬಲು ಕೆಲವು ಸ್ಟಾರ್ ಬ್ಯಾಟರ್ಗಳ ಹೆಸರು ಕೇಳಿಬರುತ್ತಿದೆ. ಈ ಸಂದರ್ಭದಲ್ಲಿ ನೆಹ್ರಾ, ಬುಮ್ರಾ ಅವರನ್ನು ಹೆಸರಿಸಿದ್ದಾರೆ.
'ರೋಹಿತ್ ಶರ್ಮಾ ಹೊರತುಪಡಿಸಿ ಕೆ.ಎಲ್.ರಾಹುಲ್, ರಿಷಭ್ ಪಂತ್ ಹೆಸರು ಕೇಳಿಬರುತ್ತಿದೆ. ಆದರೆ ಪಂತ್ ವಿಶ್ವದಾದ್ಯಂತ ಪ್ರಯಾಣ ಮಾಡಿರಬಹುದು, ಆದರೆ ಅವರು ಹೆಚ್ಚಾಗಿ ಆಟಗಾರರಿಗೆ ಡ್ರಿಂಕ್ಸ್ ಕೊಡಲು ಸೀಮಿತವಾಗಿದ್ದರು. ಕೆಲವು ಸಮಯ ತಂಡದಿಂದಲೂ ಹೊರಬಿದ್ದಿದ್ದರು. ಇನ್ನು, ರಾಹುಲ್ ಈಗಷ್ಟೇ ಟೆಸ್ಟ್ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿದ್ದಾರೆ. ಅದೂ ಮಯಾಂಕ್ ಅಗರ್ವಾಲ್ ಗಾಯಗೊಂಡಿದ್ದರಿಂದ ಅವರು ತಂಡದಲ್ಲಿ ಅವಕಾಶ ಪಡೆದಿದ್ದಾರೆ.
ಅಜಯ್ ಜಡೇಜಾ ಹೇಳಿದಂತೆ ಬುಮ್ರಾ ಆಟವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಮೇಲಾಗಿ ಅವರೂ ಮೂರು ಮಾದರಿಯ ತಂಡದಲ್ಲಿ ಖಾಯಂ ಆಟಗಾರರಾಗಿದ್ದಾರೆ. ಕ್ರಿಕೆಟ್ ಬುಕ್ನಲ್ಲಿ ಎಲ್ಲಾದರೂ ವೇಗದ ಬೌಲರ್ಗಳು ನಾಯಕರಾಗಬಾರದೆಂದು ಬರೆಯಲಾಗಿದೆಯೇ? ಎಂದು ಕ್ರಿಕ್ಬಜ್ನ ಸಂವಾದದ ವೇಳೆ ಪ್ರಶ್ನಿಸಿದರು.
ವರದಿಗಳ ಪ್ರಕಾರ, ಬಿಸಿಸಿಐ ಮುಂದಿನ ವಾರ ಭಾರತ ತಂಡಕ್ಕೆ ನೂತನ ಟಿ20 ನಾಯಕನನ್ನು ಘೋಷಣೆ ಮಾಡುವ ಸಾಧ್ಯತೆಯಿದೆ. ಈ ತಿಂಗಳಾಂತ್ಯದಲ್ಲಿ ಭಾರತ ನ್ಯೂಜಿಲ್ಯಾಂಡ್ಗೆ 3 ಪಂದ್ಯಗಳ ಟಿ20 ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಗೆ ಆತಿಥ್ಯವಹಿಸಲಿದೆ.