ಮುಂಬೈ: ವನಿತೆಯರ ಟಿ20 ವಿಶ್ವಕಪ್ನಲ್ಲಿ ಭಾರತ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೇವಲ ಐದು ರನ್ ಗಳಿಸುವಲ್ಲಿ ಎಡವಿತು. ಇದರಿಂದ ಹರ್ಮನ್ಪ್ರಿತ್ ಕೌರ್ ಪಡೆಯ ಚೊಚ್ಚಲ ವಿಶ್ವಕಪ್ ಗೆಲ್ಲುವ ಆಸೆ ಕಮರಿತು. ಇದಾದ ನಂತರ ವುಮೆನ್ ಇನ್ ಬ್ಲೂ ಪಡೆಯ ಜೊತೆಗೆ ಭಾರತದ ಅನೇಕರು ನಿಂತು ಅವರ ಗೆಲುವಿನ ಹೋರಾಟದ ಪ್ರಯತ್ನಕ್ಕೆ ಶಹಬಾಷ್ಗಿರಿ ಕೊಟ್ಟಿದ್ದಾರೆ.
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಗಳಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ಪ್ರಿತ್ ಕೌರ್ ಅವರು ನೀಡಿರುವ ಹೇಳಿಕೆಯನ್ನು ಹಂಚಿಕೊಂಡು ನಾನು ನಿಮ್ಮ ಬೆಂಬಲಕ್ಕಿದ್ದೇನೆ ಎಂದಿದ್ದಾರೆ. ಅವರು ಹಂಚಿಕೊಂಡಿರುವ ಫೋಟೋದಲ್ಲಿ ಕೌರ್ ಪಂದ್ಯದ ನಂತರ ರಾತ್ರಿ ವೇಳೆ ಸನ್ ಗ್ಲಾಸ್ ಹಾಕಿಕೊಂಡು ಬಂದ ಅವರು ಮಾತನಾಡಿದ್ದರು. ಈ ವೇಳೆ, ನನ್ನ ಕಣ್ಣೀರು ದೇಶಕ್ಕೆ ತೋರಿಸಲು ನಾನು ಇಚ್ಚಿಸಲ್ಲ ಅದಕ್ಕಾಗಿ ಸನ್ ಗ್ಲಾಸ್ ಹಾಕಿದ್ದೇನೆ ಎಂದು ಹೇಳಿ ಸೋಲಿನ ಕಹಿಯನ್ನು ನುಂಗಿಕೊಂಡಿದ್ದರು.
ಈ ಸೋಲಿನ ಬಗ್ಗೆ ಮಾತನಾಡಿದ ನಾಯಕಿ ನಾವು ಇನ್ನಷ್ಟು ಉತ್ತಮ ತಂಡವಾಗಿ ಬೆಳೆಯುತ್ತೇವೆ. ಉತ್ತಮ ಪ್ರದರ್ಶನ ನೀಡುತ್ತೇವೆ ಎಂದು ಪ್ರಮಾಣ ಮಾಡಿದ್ದರಲ್ಲದೇ ತಮ್ಮ ರನ್ ಔಟ್ ಬಗ್ಗೆ ಅತ್ಯಂತ ಬೇಸರ ವ್ಯಕ್ತಪಡಿಸಿದ್ದರು. ಈ ಸೋಲಿನ ನಂತರ ಅನುಷ್ಕಾ ಶರ್ಮಾ ಸೇರಿದಂತೆ ಹಲವರು ಮಹಿಳಾ ಕ್ರಿಕೆಟ್ ತಂಡದ ನಾಯಕಿಯ ಬೆಂಬಲಕ್ಕೆ ನಿಂತಿದ್ದಾರೆ. ಸೋಲಿನ ಬೆನ್ನಲ್ಲೇ ಟ್ವಿಟ್ ಮಾಡಿದ್ದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಉತ್ತಮ ಆಟ ಆಡಿದ್ದಾರೆ ಎಂದು ಬರೆದುಕೊಂಡಿದ್ದರು.
ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತ ನಂತರ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರನ್ನು ಹೊಗಳಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹರ್ಮನ್‌ಪ್ರೀತ್ ಕೌರ್ ಅವರ ಲೇಖನವನ್ನು ಹಂಚಿಕೊಂಡು, ಅದಕ್ಕೆ ಬ್ಲೂ ಹಾರ್ಟ್‌ನೊಂದಿಗೆ 'ನಿಮ್ಮ ಮತ್ತು ನಿಮ್ಮ ತಂಡದ ನಾಯಕಿಯ ಬಗ್ಗೆ ನಮಗೆ ಹೆಮ್ಮೆ ಇದೆ' ಎಂದು ಬರೆದು ಕೌರ್ಗೆ ಟ್ಯಾಗ್ ಮಾಡಿದ್ದಾರೆ.
ಭಾರತದ ಮಾಜಿ ನಾಯಕಿ ಅಂಜುಮ್ ಚೋಪ್ರಾ ಅವರು ಸೆಮಿಫೈನಲ್‌ನಲ್ಲಿ ಸೋತ ನಂತರ ಹರ್ಮನ್‌ಪ್ರೀತ್ ಅವರನ್ನು ಸಮಾಧಾನಪಡಿಸುತ್ತಿರುವುದನ್ನು ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ ಅನುಷ್ಕಾ ಇದು ನಮ್ಮ ಮಹಿಳೆಯರ ತಂಡ ಎಂದು ದುಃಖದ ಮತ್ತು ಕೆಂಪು ಹಾರ್ಟ್ನ ಎಮೋಜಿ ಹಾಕಿ ಬೆಂಬಲಿಸಿದ್ದಾರೆ.
ಗುರುವಾರ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ್ದ ಆಸ್ಟ್ರೇಲಿಯಾ ತಂಡ 172ರನ್ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಭಾರತಕ್ಕೆ ಹರ್ಮನ್‌ಪ್ರೀತ್ ಕೌರ್ ಮತ್ತು ಜೆಮಿಮಾ ರಾಡ್ರಿಗಸ್ ಆಸರೆಯಾಗಿ ನಿಂತಿದ್ದರು. 52 ಗಳಿಸಿ ಆಡುತ್ತಿದ್ದ ಭಾರತದ ನಾಯಕಿ ರನ್ ಔಟ್ ಆದದ್ದು ಪಂದ್ಯದ ಮಹತ್ತರ ತಿರುವಾಗಿದೆ. ರನ್ ಔಟ್ನಿಂದಾಗಿ ಗೆಲುವಿನ ಸನಿಹದಲ್ಲಿ ಪಂದ್ಯ ಕೈ ಚೆಲ್ಲುವ ಪರಿಸ್ಥಿತಿ ಎದುರಾಯಿತು. ಕೇವಲ ಐದು ರನ್ನಿಂದ ಭಾರತ ಎರಡನೇ ಬಾರಿಗೆ ಫೈನಲ್ ಮೆಟ್ಟಿಲೇರುವ ಅವಕಾಶದಿಂದ ವಂಚಿತವಾಯಿತು.
ಇದನ್ನೂ ಓದಿ: ನಾಳೆ ವನಿತೆಯರ ವಿಶ್ವಕಪ್ ಅಂತಿಮ ಹಣಾಹಣಿ: ಮೊದಲ ಕಪ್ ಗೆಲ್ಲುವ ತವಕದಲ್ಲಿ ಹರಿಣಗಳ ಪಡೆ