ಮುಂಬೈ: ನಿನ್ನೆ ಧರ್ಮಶಾಲಾದಲ್ಲಿ ನಡೆದ ಏಕದಿನ ವಿಶ್ವಕಪ್ (World Cup)ಸರಣಿಯ 21ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದ ಭಾರತ ಭರ್ಜರಿ ಪ್ರದರ್ಶನ ತೋರಿ 4 ವಿಕೆಟ್ಗಳ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 95 ರನ್‌ಗಳ ಅಮೋಘ ಇನ್ನಿಂಗ್ಸ್ ಆಡಿ ಸಂಕಷ್ಟದಲ್ಲಿದ್ದ ಭಾರತವನ್ನು ಗೆಲುವಿನ ದಡ ಸೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಈ ಮೂಲಕ ರನ್ ಚೇಸಿಂಗ್ನಲ್ಲಿ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಮತ್ತೊಂದೆಡೆ ಪತಿಯ ಆಟಕ್ಕೆ ಮನಸೋತ ಪತ್ನಿ ಅನುಷ್ಕಾ ಶರ್ಮಾ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ವಿರಾಟ್ ಕೊಹ್ಲಿಯ ದೊಡ್ಡ ಚೀರ್‌ಲೀಡರ್ ಆಗಿರುವ ಪತ್ನಿ ಅನುಷ್ಕಾ ನಿನ್ನೆಯ ಪಂದ್ಯದ ಬಳಿಕ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಕೊಹ್ಲಿಯನ್ನು ಕೊಂಡಾಡಿದ್ದಾರೆ. ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಕೊಹ್ಲಿಯ ಇನ್ನಿಂಗ್ಸ್‌ನ ವಿಡಿಯೋವನ್ನು ಹಂಚಿಕೊಂಡ ಅವರು, 'ನಿಮ್ಮ ಬಗ್ಗೆ ಯಾವಾಗಲೂ ಹೆಮ್ಮೆಪಡುತ್ತೇನೆ' ಎಂದು ಬರೆದಿದ್ದಾರೆ. ಎರಡನೇ ಸ್ಟೋರಿಯಲ್ಲಿ ಕೊಹ್ಲಿ ಚಿತ್ರವನ್ನು ಹಂಚಿಕೊಂಡು 'ಸ್ಟಾರ್ಮ್ ಚೇಸರ್' ಎಂದು ಬರೆದುಕೊಂಡಿದ್ದಾರೆ. ಕೊಹ್ಲಿ ಉತ್ತಮ ಇನ್ನಿಂಗ್ಸ್ಗಳನ್ನು ಆಡಿರುವ ಸಂದರ್ಭಗಳಲ್ಲಿ ಅನುಷ್ಕಾ ಇನ್ಸ್ಟಾದಲ್ಲಿ ಸ್ಟೋರಿಗಳನ್ನು ಹಂಚಿಕೊಳ್ಳುವ ಮೂಲಕ ಕೊಹ್ಲಿಯನ್ನು ಹುರಿದುಂಬಿಸುತ್ತಲೇ ಇರುತ್ತಾರೆ.
ಕೊಹ್ಲಿ ಸಹೋದರಿ ಭಾವನಾ ಕೂಡ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ವಿರಾಟ್ ಕೊಹ್ಲಿಯ ಚಿತ್ರವನ್ನು ಹಂಚಿಕೊಂಡು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿರುವ ಕೊಹ್ಲಿ 104 ಎಸೆತಗಳನ್ನು 95 ರನ್ಗಳಿಸಿದರು. ಶತಕ ಪೂರೈಸಲು ಇನ್ನೂ 5 ರನ್ಗಳು ಬಾಕಿ ಇರುವಾಗ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದರಾದರೂ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿದರು.
20 ವರ್ಷಗಳ ಬಳಿಕ ಕಿವಿಸ್ ವಿರುದ್ಧ ಜಯ: 20 ವರ್ಷಗಳ ಬಳಿಕ ಭಾರತ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿತು. ವಿಶ್ವಕಪ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ 10 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ನ್ಯೂಜಿಲೆಂಡ 5ಬಾರಿ ಗೆಲುವು ದಾಖಲಿಸಿದರೆ ಭಾರತ 4 ಬಾರಿ ಗೆಲುವು ದಾಖಲಿಸಿದೆ. ಒಂದು ಪಂದ್ಯ ರದ್ದಾಗಿತ್ತು.
ಏಕದಿನ 117 ಏಕದಿನ ಪಂದ್ಯ: ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಉತ್ತಮ ದಾಖಲೆ ಹೊಂದಿದೆ. ಉಭಯ ತಂಡಗಳು 1975 ರಿಂದ ಈ ವರೆಗೂ 117 ಏಕದಿನ ಪಂದ್ಯಗಳನ್ನು ಆಡಿವೆ. ಇದರಲ್ಲಿ ಭಾರತ 59 ಪಂದ್ಯಗಳನ್ನು ಗೆದ್ದುಕೊಂಡಿದೆ. ಕೊನೆಯ ಹತ್ತು ಪಂದ್ಯಗಳಲ್ಲಿ ನ್ಯೂಜಿಲೆಂಡ 5 ಪಂದ್ಯಗಳನ್ನು ಗೆದ್ದರೆ ಭಾರತ 4ರಲ್ಲಿ ಗೆಲುವು ದಾಖಲಿಸಿದೆ ಒಂದು ಪಂದ್ಯ ರದ್ದುಗೊಂಡಿದೆ.
ಇದನ್ನೂ ಓದಿ: ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಸಿಡಿಲಬ್ಬರದ ಬ್ಯಾಟಿಂಗ್: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಗೆಲುವು