ಕೊಲಂಬೊ: ಇಲ್ಲಿನ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಐದನೇ ಪಂದ್ಯದಲ್ಲಿ ಆಸಿಸ್ ಪಡೆ ಲಂಕಾ ವಿರುದ್ಧ ನಾಲ್ಕು ವಿಕೆಟ್ಗಳಿಂದ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಸರಣಿ ಸೋಲಿನ ಅಂತರವನ್ನು 3-2ಕ್ಕೆ ಇಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ್ದ ಶ್ರೀಲಂಕಾ ತಂಡದ ಬ್ಯಾಟರ್‌ಗಳು ಸಂಪೂರ್ಣವಾಗಿ ವಿಫಲವಾದರು. ಆಸ್ಟ್ರೇಲಿಯಾದ ಬೌಲಿಂಗ್ ದಾಳಿಗೆ ನಲುಗಿದ ಶ್ರೀಲಂಕಾ ಕ್ರೀಸ್‌ನಲ್ಲಿ ನೆಲೆಯೂರಲು ವಿಫಲವಾಯಿತು. ಯಾರೂ ಕೂಡಾ ಹೆಚ್ಚಿನ ಮೊತ್ತ ಗಳಿಸಲು ಸಫಲವಾಗಲೇ ಇಲ್ಲ. ಶ್ರೀಲಂಕಾ ತಂಡಕ್ಕೆ ಅಗತ್ಯವಾಗಿದ್ದ ಜೊತೆಯಾಟ ಕೂಡ ದೊರೆಯಲಿಲ್ಲ. ಇದರ ಪರಿಣಾಮವಾಗಿ ಶ್ರೀಲಂಕಾ 85 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಕನಿಷ್ಠ ಮೊತ್ತಕ್ಕೆ ಆಲೌಟ್ ಆಗುವತ್ತ ಸಾಗಿತ್ತು.
ಈ ಹಂತದಲ್ಲಿ ಶ್ರೀಲಂಕಾದ ವೇಗದ ಬೌಲರ್ ಚಾಮಿಕ ಕರುಣರತ್ನೆ ತಂಡದ ಪರವಾಗಿ ಅದ್ಭುತ ಇನ್ನಿಂಗ್ಸ್ ಆಡಿದರು. ಪ್ರಮೋದ್ ಮದುಶನ್ ಅವರ ನೆರವಿನೊಂದಿಗೆ 9ನೇ ವಿಕೆಟ್‌ಗೆ ಕರುಣರತ್ನೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಭರ್ಜರಿ 75 ರನ್‌ಗಳನ್ನು ಕಲೆ ಹಾಕುವ ಮೂಲಕ ತಂಡದ ಮೊತ್ತವನ್ನು ಏರಿಸಲು ಸಫಲರಾದರು. ಕಮ್ಮಿಂಗ್ಸ್ ಬೌಲಿಂಗ್ನಲ್ಲಿ ಕರುಣರತ್ನೆ ವಿಕೆಟ್ವೊಪ್ಪಿಸಿದರು. 43.1 ಓವರ್ಗಳಿಗೆ ಶ್ರೀಲಂಕಾ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು 160 ರನ್‌ಗಳಿಸಲು ಮಾತ್ರ ಸಾಧ್ಯವಾಯಿತು.
ಓದಿ: ಶ್ರೀಲಂಕಾ ಪ್ರವಾಸದ ಮೊದಲ ಟಿ-20 ಪಂದ್ಯದಲ್ಲಿ ಗೆದ್ದ ಭಾರತದ ವನಿತೆಯರು
ಆಸ್ಟ್ರೇಲಿಯಾ ತಂಡದ ಪರ ಜೋಶ್ ಹ್ಯಾಜಲ್‌ವುಡ್, ಮ್ಯಾಥ್ಯೂ ಕುಹ್ನೆಮನ್ ಮತ್ತು ಪ್ಯಾಟ್ ಕಮ್ಮಿನ್ಸ್ ತಲಾ ಎರಡೆರಡು ವಿಕೆಟ್ ಪಡೆದರು. ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಕ್ಯಾಮರೂನ್ ಗ್ರೀನ್ ತಲಾ ಒಂದೊಂದು ವಿಕೆಟ್ ಪಡೆಯುವ ಮೂಲಕ ಶ್ರೀಲಂಕಾ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟು ಹಾಕುವಲ್ಲಿ ಯಶಸ್ವಿಯಾದರು.
ಇನ್ನು ಶ್ರೀಲಂಕಾ ನೀಡಿದ ಈ ಸುಲಭ ಗುರಿಯನ್ನು ಆಸ್ಟ್ರೇಲಿಯಾ ತಂಡ ಪರದಾಡಿಕೊಂಡೇ ತಲುಪಿತು. ಆಸ್ಟ್ರೇಲಿಯಾದ ಅಗ್ರ ಕ್ರಮಾಂಕ ಈ ಪಂದ್ಯದಲ್ಲಿ ಕೂಡ ಮತ್ತೊಮ್ಮೆ ವೈಫಲ್ಯ ಕಂಡಿತು. ಆದರೆ, ಕೆಳ ಕ್ರಮಾಂಕದ ಆಟಗಾರರು ಜವಾಬ್ಧಾರಿಯುತ ಪ್ರದರ್ಶನದಿಂದ ಆಸ್ಟ್ರೇಲಿಯಾ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು.
ಆಸ್ಟ್ರೇಲಿಯಾ ಬ್ಯಾಟರ್ ಅಲೆಕ್ಸ್ ಕ್ಯಾರಿ 45 ರನ್ ಬಾರಿಸಿದರೆ, ಕ್ಯಾಮರೂನ್ ಗ್ರೀನ್ 25 ರನ್‌ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಈ ಮೂಲಕ ಆಸ್ಟ್ರೇಲಿಯಾ 6 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಈ ಪಂದ್ಯದಲ್ಲಿಯೂ ನಾಯಕ ಫಿಂಚ್ ಸಹಿತ ಆಸಿಸ್ ಪಡೆಯ ಬಹುತೇಕ ಆಟಗಾರರು ಕಳಪೆ ಪ್ರದರ್ಶನ ನೀಡಿದ್ದಾರೆ.
ಇನ್ನು ಶ್ರೀಲಂಕಾ ತಂಡದ ಪರ ದುನಿತ್ ವೆಲ್ಲಲಾಗೆ 3 ವಿಕೆಟ್ ಪಡೆದು ಮಿಂಚಿದರೆ, ಮಹೀಶ್ ತೀಕ್ಷಣ 2 ವಿಕೆಟ್ ಮತ್ತು ಪ್ರಮೋದ್ ಮದುಶನ್ ಒಂದು ವಿಕೆಟ್ ಪಡೆದರು. ಇನ್ನು ಆಸ್ಟ್ರೇಲಿಯಾ ವಿರುದ್ಧ ಈಗಾಗಲೇ ಮೂರು ಪಂದ್ಯಗಳನ್ನು ಗೆದ್ದಿರುವ ಶ್ರೀಲಂಕಾ ಸರಣಿ ತನ್ನದಾಗಿಸಿಕೊಂಡಿದೆ.