ನವದೆಹಲಿ : ಮೊದಲ ವಿಶ್ವ ಚಾಂಪಿಯನ್ಶಿಪ್ನಲ್ಲಿ ಅದ್ಭುತ ಪ್ರದರ್ಶನ ತೋರಿರುವ ಯುವ ಶಟ್ಲರ್ ಲಕ್ಷ್ಯಸೇನ್, ತಮಗೆ ಕಂಚಿನ ಪದಕ ಗೆದ್ದಿರುವುದು ತೃಪ್ತಿ ತಂದಿಲ್ಲ. ಆದರೆ, ಮುಂದಿನ ಬಾರಿ ಖಂಡಿತ ಚಿನ್ನದ ಪದಕ ಗೆಲ್ಲಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.
20 ವರ್ಷದ ಶಟ್ಲರ್ ಶನಿವಾರ ನಡೆದ ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್ ಸೆಮಿಫೈನಲ್ನಲ್ಲಿ ಭಾರತದವರೇ ಆದ ಕಿಡಂಬಿ ಶ್ರೀಕಾಂತ್ ವಿರುದ್ಧ 21-17, 14-21, 17-21ರ ರೋಚಕ ಕದನದಲ್ಲಿ ಸೋಲು ಕಂಡು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.
"ಇದೊಂದು ತುಂಬಾ ದೊಡ್ಡ ಟೂರ್ನಮೆಂಟ್ ಮತ್ತು ಈ ರೀತಿ ಹತ್ತಿರಕ್ಕೆ ಬಂದು ಸೋಲು ಕಂಡಾಗ ಅದನ್ನು ಸ್ವೀಕರಿಸುವುದು ತುಂಬಾ ಕಷ್ಟವಾಗುತ್ತದೆ. ನಾನೂ ಕನಿಷ್ಠ ಕಂಚನ್ನಾದರೂ ಗೆದ್ದಿದ್ದೇನೆ. ಆದರೆ, ಇದರಿಂದ ನಾನು ಸಂತೋಷವಾಗಿಲ್ಲ. ಸೆಮಿಫೈನಲ್ನಲ್ಲಿ ನಾನು ನೀಡಿದ ಪ್ರದರ್ಶನ ನನಗೆ ತೃಪ್ತಿ ನೀಡಿಲ್ಲ" ಎಂದು ಲಕ್ಷ್ಯ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
"ನಾನು ಟೂರ್ನಿಯಲ್ಲಿ ಸಾಕಷ್ಟು ಒಳ್ಳೆಯ ಪಂದ್ಯಗಳನ್ನಾಡಿದ್ದೇನೆ, ತುಂಬಾ ಕಠಿಣವಾದ ಎದುರಾಳಿಗಳನ್ನು ಎದುರಿಸಿದ್ದೇನೆ, ಸೆಮಿಫೈನಲ್ ಪಂದ್ಯ ಕೂಡ ತುಂಬಾ ಗೆಲುವಿಗೆ ಹತ್ತಿರವಾದ ಪಂದ್ಯವಾಗಿತ್ತು. ಈ ಪದಕ ನನಗೆ ಮುಂದೆ ಹೋಗುವುದಕ್ಕೆ ಒಂದು ವಿಶ್ವಾಸ ನೀಡಿದೆ. ಮುಂದಿನ ಬಾರಿ ನಾನು ಚಿನ್ನದ ಪದಕಕ್ಕಾಗಿ ಹೋಗುವೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲಕ್ಷ್ಯ ಸೇನ್ ಈ ಪದಕದೊಂದಿಗೆ ತಮ್ಮ ಹಿರಿಯ ಮಾರ್ಗದರ್ಶಕರಾದ ಕನ್ನಡಿಗ ಪ್ರಕಾಶ್ ಪಡುಕೋಣೆ(1983), ಸಾಯಿ ಪ್ರಣೀತ್(2019) ಜೊತೆಗೆ ಚಾಂಪಿಯನ್ಶಿಪ್ನಲ್ಲಿ ಪದಕ ಗೆದ್ದ ಪ್ರತಿಷ್ಠಿತ ಪಟ್ಟಿಗೆ ಸೇರಿಕೊಂಡರು.
ಪ್ರಕಾಶ್ ಸರ್ ಅಂತೆ ಸಾಕಷ್ಟು ಟೂರ್ನಮೆಂಟ್ ಗೆಲ್ಲಬೇಕು : ಇದು ನನ್ನ ಮೊದಲ ವಿಶ್ವಚಾಂಪಿಯನ್ಶಿಪ್, ನಾನು ಸೆಮಿಫೈನಲ್ ಪ್ರವೇಶಿಸಿದ್ದೇನೆ ಮತ್ತು ಪ್ರಕಾಶ್ ಸರ್ ಇರುವ ಪಟ್ಟಿಯಲ್ಲಿ ಸೇರಿಕೊಂಡಿದ್ದೇನೆ. ಆದರೆ, ನಾನು ಅವರಂತೆಯೇ ಸಾಕಷ್ಟು ಇವೆಂಟ್ ಮತ್ತು ಹೆಚ್ಚು ಪದಕಗಳನ್ನು ಗೆಲ್ಲವುದಕ್ಕೆ ಎದುರು ನೋಡುತ್ತಿದ್ದೇನೆ. ಅದರಲ್ಲೂ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಗೆಲ್ಲಬೇಕು ಎಂದು ಸೇನ್ ತಿಳಿಸಿದ್ದಾರೆ.
ಈ ಕಂಚಿನ ಪದಕ ನನ್ನಲ್ಲಿನ ಆತ್ಮಿವಿಶ್ವಾಸವನ್ನು ಹೆಚ್ಚಿಸಿದೆ. ಇದು ನನ್ನ ಭವಿಷ್ಯದ ಟೂರ್ನಮೆಂಟ್ಗಳಿಗೆ ತಳಪಾಯವಾಗಿದೆ ಎಂದು 20 ವರ್ಷದ ಯುವ ಶಟ್ಲರ್ ಹೇಳಿದ್ದಾರೆ.