ಸತತ ನಾಲ್ಕನೇ ವಾರವೂ ಬಿಗ್ಬಾಸ್ ಸೀಸನ್ 8ರ ಮನೆಯಲ್ಲಿ ಕಿಚ್ಚನ ಪಂಚಾಯಿತಿ ಇಲ್ಲ. ಇಂದು ಶನಿವಾರವಾದರೂ ನಟ ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಯ ಸದಸ್ಯರೊಂದಿಗೆ ಕಿಚ್ಚನ ಪಂಚಾಯಿತಿ ನಡೆಸಲು ಬರುತ್ತಿಲ್ಲ. ಶೂಟಿಂಗ್ ನಡೆಸದಂತೆ ಸರ್ಕಾರ ಆದೇಶಿಸಿರುವುದರಿಂದ ಈ ವಾರದ ಕಿಚ್ಚನ ಪಂಚಾಯತಿ ನಡೆಯುತ್ತಿಲ್ಲ ಎಂದು ತಿಳಿದು ಬಂದಿದೆ.
ಇಂದು ಪ್ರತಿ ವಾರದಂತೆ ಮನೆಯ ಸದಸ್ಯರೊಂದಿಗೆ ಮಾತುಕತೆ ನಡೆಯಲಿದೆ. ನಂತರ ನಾಳೆ ಎಲಿಮಿನೇಷನ್ ಸುತ್ತು ಸಹ ನಡೆಯಲಿದೆಯಂತೆ. ಮನೆಯಿಂದ ಒಬ್ಬರು ಅಥವಾ ಇಬ್ಬರು ಸದಸ್ಯರು ಹೊರ ಹೊರಹೋಗುವ ಎಲ್ಲಾ ಸಾಧ್ಯತೆಗಳು ಇದೆ ಎನ್ನಲಾಗಿದೆ.
ಸೋಮವಾರದಿಂದ ಸರ್ಕಾರ ಹತ್ತು ದಿನಗಳ ಕಾಲ ಲಾಕ್ಡೌನ್ ಹೇರಿರುವ ಕಾರಣ ಮುಂದಿನ ವಾರವೂ ಸುದೀಪ್ ಆಗಮಿಸುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.
ಲಾಕ್ಡೌನ್ ಮುಗಿದ ನಂತರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಆಧಾರದ ಮೇಲೆ ನಟ ಸುದೀಪ್ ಬಿಗ್ಬಾಸ್ ಮನೆಯ ಪಂಚಾಯಿತಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಇನ್ನು ಕೆಲವೇ ದಿನಗಳು ಉಳಿದುಕೊಳ್ಳುವುದರಿಂದ ಮನೆಯಲ್ಲಿ ಟಾಸ್ಕ್ಗಳನ್ನು ನೀಡಿ, ಕಾರ್ಯಕ್ರಮವನ್ನು 100 ದಿನಗಳ ಕಾಲ ಮುಂದುವರಿಸುವುದು ವಾಹಿನಿಯ ಮುಖ್ಯ ಉದ್ದೇಶವಾಗಿದೆ.
ಅನಾರೋಗ್ಯದ ಕಾರಣ ಮೂರು ದಿನಗಳ ಹಿಂದೆ ಮನೆಯ ಸ್ಟ್ರಾಂಗ್ ಕಂಟೆಸ್ಟಂಟ್ ಆಗಿದ್ದ ದಿವ್ಯ ಉರುಡುಗ ಮನೆಯಿಂದ ಹೊರ ಬರಬೇಕಾಯಿತು. ಅಲ್ಲಿಂದ ಹೊರ ಬಂದ ಡಿಯು ನೇರವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮನೆಯಲ್ಲಿ ಇದೀಗ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಸೇರಿದಂತೆ 11 ಮಂದಿ ಉಳಿದಿದ್ದು, ಇನ್ನು ಹೆಚ್ಚೆಂದರೆ ನಾಲ್ಕೈದು ವಾರಗಳ ಕಾಲ ಬಿಗ್ಬಾಸ್ ನಡೆಯಬಹುದು ಎನ್ನಲಾಗುತ್ತಿದೆ.