ಕಿರುತೆರೆಯಿಂದ ಬೆಳ್ಳಿತೆರೆಗೆ, ಬೆಳ್ಳಿ ತೆರೆಯಿಂದ ಕಿರುತೆರೆಗೆ ಎಷ್ಟೋ ನಟ-ನಟಿಯರು ಬಂದು ಹೋಗಿದ್ದಾರೆ. ಆದರೆ ಬೆಳ್ಳಿತೆರೆಯಲ್ಲಿ ಹೆಸರು ಮಾಡಿದ ಸ್ಟಾರ್ ನಟರು ಕಿರುತೆರೆಗೆ ಬಂದು ಹೋಗಿದ್ದಾರೆ. ಆದರೆ ಇವರು ಕೆಲವೊಂದು ಕಾರ್ಯಕ್ರಮಗಳಲ್ಲಿ ಜಡ್ಜ್ ಆಗಿ, ನಿರೂಪಕರಾಗಿ ಹಾಗೂ ಕೆಲವೊಂದು ಧಾರಾವಾಹಿಗಳಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿ ಹೋಗಿದ್ದಾರೆ.
ಲಕ್ಷ್ಮಿ
ಕನ್ನಡ ಸೇರಿದಂತೆ ತಮಿಳು , ತೆಲುಗು , ಹಿಂದಿ ಭಾಷೆಗಳಲ್ಲಿ ನಟಿಸಿ ಮನೆಮಾತಾದ ಲಕ್ಷ್ಮಿ ಜ್ಯೂಲಿ ಲಕ್ಷ್ಮಿ ಎಂದೇ ಫೇಮಸ್. ಕಥೆಯಲ್ಲ ಜೀವನ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಬಂದ ಲಕ್ಷ್ಮಿ, ಮುಂದೆ ಜೀ ಕನ್ನಡದ ಡ್ರಾಮಾ ಜೂನಿಯರ್ಸ್ನಲ್ಲಿ ತೀರ್ಪುಗಾರರಾಗಿ ಕನ್ನಡಿಗರ ಪ್ರೀತಿ ಗಳಿಸಿದರು. ಇದರ ಜೊತೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸದಾ ನಿಮ್ಮೊಂದಿಗೆ ಕಾರ್ಯಕ್ರಮದ ನಿರೂಪಕರಾಗಿಯೂ ಆಕೆ ಮನೆ ಮಾತಾಗಿದ್ದರು.
ರವಿಚಂದ್ರನ್
ವಿಭಿನ್ನ ರೀತಿಯ ಸಿನಿಮಾಗಳ ಮೂಲಕ ಚಂದನವನದಲ್ಲಿ ಹೊಸ ಅಲೆಯನ್ನೇ ಸೃಷ್ಟಿ ಮಾಡಿದ ಕ್ರೇಜಿ ಸ್ಟಾರ್ ರವಿಚಂದ್ರನ್ ಕೂಡಾ ಕಿರುತೆರೆಗೆ ಕಾಲಿಟ್ಟಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ತಕಧಿಮಿತ ಡ್ಯಾನ್ಸ್ ಶೋ ನಲ್ಲಿ ತೀರ್ಪುಗಾರರಾಗಿ ರವಿಚಂದ್ರನ್ ಕಾರ್ಯ ನಿರ್ವಹಿಸಿದ್ದಾರೆ.
ಸುದೀಪ್
ಬಿಗ್ ಬಾಸ್ ಎಂದರೆ ನೆನಪಿಗೆ ಬರುವುದು ಸುದೀಪ್, 7 ಎಪಿಸೋಡ್ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಕೊರೊನಾ ಸಮಸ್ಯೆ ಇಲ್ಲದಿದ್ದರೆ ಈ ವೇಳೆಗೆ 8ನೇ ಬಿಗ್ ಬಾಸ್ ಆವೃತ್ತಿಗೆ ನಿರೂಪಣೆ ಮಾಡಬೇಕಿತ್ತು. ಬಿಗ್ಬಾಸ್ ಮೂಲಕ ತಾನೊಬ್ಬ ನಟ, ನಿರ್ದೇಶಕ, ನಿರ್ಮಾಪಕ, ಗಾಯಕ ಮಾತ್ರವಲ್ಲ ನಿರೂಪಕ ಎಂದು ಸುದೀಪ್ ಸಾಬೀತು ಮಾಡಿದ್ದಾರೆ.
ಪುನೀತ್ ರಾಜ್ಕುಮಾರ್
ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ನಡೆಸಿಕೊಟ್ಟಿರುವ ಪುನೀತ್ ಕೂಡಾ ತಾನು ನಟ ಮಾತ್ರವಲ್ಲ ನಿರೂಪಣೆಗೂ ಸೈ ಎಂದು ತೋರಿಸಿಕೊಟ್ಟಿದ್ದಾರೆ. ಪುನೀತ್ ಯಶಸ್ವಿ ಮೂರು ಎಪಿಸೋಡ್ಗಳನ್ನು ನಡೆಸಿಕೊಟ್ಟಿದ್ದಾರೆ.
ಶಿವರಾಜ್ಕುಮಾರ್
ಯಂಗ್ ಅ್ಯಂಡ್ ಎನರ್ಜಿಟಿಕ್ ಹಿರೋ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಗಾಯಕ, ನಟ, ಡ್ಯಾನ್ಸರ್ ಆಗಿ ಕರುನಾಡ ಚಕ್ರವರ್ತಿ ಎಂದು ಹೆಸರಾಗಿದ್ದಾರೆ. ಇದರ ಜೊತೆಗೆ ನಿರೂಪಣೆಯಲ್ಲೂ ಸೈ ಎನ್ನಿಸಿಕೊಂಡಿರುವ ಅವರು. ನಂ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮದ ನಿರೂಪಣೆ ಮಾಡಿದ್ದಾರೆ.
ಜಗ್ಗೇಶ್
ನವರಸ ನಾಯಕನೆಂದೇ ಪ್ರಸಿದ್ಧರಾಗಿರುವ ಜಗ್ಗೇಶ್ ಕೂಡಾ ಕಿರುತೆರೆಯಲ್ಲಿ ಮಿಂಚಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಶೋ ತೀರ್ಪುಗಾರರಾಗಿ ಕಿರುತೆರೆಗೆ ಬಂದ ನವರಸ ನಾಯಕ, ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾದರು.
ರಕ್ಷಿತಾ
ಸ್ವಯಂವರ ಶೋ ಮೂಲಕ ಕಿರುತೆರೆ ಪಯಣ ಆರಂಭಿಸಿದ ಇವರು ಕಾಮಿಡಿ ಕಿಲಾಡಿ , ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮುಂತಾದ ಶೋಗಳಲ್ಲಿ ತೀರ್ಪುಗಾರರಾಗಿದ್ದರು. ಆ ಮೂಲಕ ಹಿರಿತೆರೆಯ ಜೊತೆಗೆ ಕಿರುತೆರೆಯ ಮೂಲಕ ಮನೆ ಮಾತಾದರು.
ರಮೇಶ್ ಅರವಿಂದ್
ಪ್ರೀತಿಯಿಂದ ರಮೇಶ್ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಕಾಲಿಟ್ಟ ರಮೇಶ್ ಅರವಿಂದ್, ನಂತರ ರಾಜಾ-ರಾಣಿ ರಮೇಶ್ ನಿರೂಪಕರಾಗಿ ಗಮನ ಸೆಳೆದರು. ಇದರ ಜೊತೆಗೆ, ಕನ್ನಡದ ಕೋಟ್ಯಧಿಪತಿ, ವೀಕೆಂಡ್ ವಿತ್ ರಮೇಶ್ ಶೋ ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು.
ಎಸ್. ನಾರಾಯಣ್
ಕಲಾ ಸಾಮ್ರಾಟ್ ಎಸ್. ನಾರಾಯಣ್ ನಿರ್ದೇಶಕ ಹಾಗೂ ನಟರಾಗಿ ಮಿಂಚಿದವರು. ಕಲರ್ಸ್ ಸೂಪರ್ ವಾಹಿನಿಯ ಮಜಾ ಭಾರತದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡರು. ಎಸ್. ನಾರಾಯಣ್ ಪಾರು ಧಾರಾವಾಹಿಯಲ್ಲಿ ಕೂಡಾ ನಟಿಸಿದ್ದಾರೆ.
ಶ್ರುತಿ
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಜಾ ಭಾರತದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಬಂದ ಶ್ರುತಿ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸತ್ಯಕಥೆಯ ನಿರೂಪಕಿಯಾಗಿ ಗಮನ ಸೆಳೆದಿದ್ದಾರೆ.
ಪ್ರಿಯಾಮಣಿ
ಬಹುಭಾಷಾ ನಟಿ ಪ್ರಿಯಾಮಣಿ ಕನ್ನಡ ಕಿರುತೆರೆಗೆ ಡ್ಯಾನ್ಸಿಂಗ್ ಸ್ಟಾರ್ ಮೂಲಕ ಕಿರುತೆರೆಯಲ್ಲಿ ಕಮಾಲ್ ಮಾಡಿದರು. ಇದರ ಜೊತೆಗೆ ಬೇರೆ ಭಾಷೆಗಳ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡ ಖ್ಯಾತಿ ಪ್ರಿಯಾಮಣಿ ಅವರಿಗೆ ಇದೆ.
ಗಣೇಶ್
ಗೋಲ್ಡನ್ ಸ್ಟಾರ್ ಗಣೇಶ್ ಕಾಮಿಡಿ ಟೈಂ ಶೋನಿಂದಲೇ ಬಣ್ಣದ ಪಯಣ ಆರಂಭಿಸಿದವರು. ಇದು ಅವರಿಗೆ ಭಾರೀ ಹೆಸರು ನೀಡಿತ್ತು. ಇವರು ಸ್ಟಾರ್ ಆದ ನಂತರ ನಂತರ ಕಲರ್ಸ್ ಕನ್ನಡದಲ್ಲಿ ಸೂಪರ್ ಮಿನಿಟ್ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ.