ಐ ಆಮ್ ಡಾಕ್ಟರ್ ವಿಠಲ್ ರಾವ್, ವೆರಿ ಫೇಮಸ್ ಇನ್ ಸರ್ಜರಿ ಅಂಡ್ ಭರ್ಜರಿ. ನಾನು ಲಲಿತಾಂಬ. ನನ್ನ ನಂಬಿ ಪ್ಲೀಸ್ ಪ್ಲೀಸ್, ನಾನು ಕಥಾ ಲೇಖಕಿ ಶ್ರೀಲತಾ, ಶ್ರೀರಂಗ ಪಟ್ಟಣಕ್ಕೆ ಕೊಡ್ಲಾ ಬಸ್ ಚಾರ್ಜ್, ಈ ಡೈಲಾಗ್ಗಳನ್ನು ಕಿರುತೆರೆ ವೀಕ್ಷಕರು ಮರೆಯುವುದುಂಟೇ? ಕನ್ನಡದ ಜನಪ್ರಿಯ ಹಾಸ್ಯ ಧಾರಾವಾಹಿಗಳ ಪೈಕಿ ಒಂದಾದ ಸಿಲ್ಲಿ ಲಲ್ಲಿಯನ್ನು ನೋಡಿ ರಂಜಿಸದವರಿಲ್ಲ. ದಶಕಗಳ ಹಿಂದೆಯೇ ಪ್ರಸಾರವಾಗುತ್ತಿದ್ದ ಸಿಲ್ಲಿ ಲಲ್ಲಿ ಮುಗಿದು ವರುಷಗಳೇ ಕಳೆದರೂ ಇಂದಿಗೂ ಕೂಡಾ ಅದು ವೀಕ್ಷಕರ ಮನದಲ್ಲಿ ಅಚ್ಚೊತ್ತಿದೆ.
ಸಿಲ್ಲಿ ಲಲ್ಲಿ ಸೀಸನ್ 2 ಈಗಾಗಲೇ ಆರಂಭವಾಗಿದೆ. ಹಳೆಯ ಪಾತ್ರಕ್ಕೆ ಹೊಸ ಕಲಾವಿದರುಗಳು ಕೂಡಾ ಜೀವ ತುಂಬಿದ್ದಾರೆ, ತುಂಬುತ್ತಿದ್ದಾರೆ. ಆದರೂ ಕೂಡಾ ಜನ ಬಯಸುವುದು ಹಳೆಯ ಕಲಾವಿದರುಗಳನ್ನ. ಡಾಕ್ಟರ್ ವಿಠಲ್ ರಾವ್ ಎಂದ ಕೂಡಲೇ ಜನರಿಗೆ ನೆನಪಾಗುವುದು ರವಿಶಂಕರ್ ಗೌಡ, ಲಲಿತಾಂಬ ಎಂದಾಗ ಕಣ್ಣ ಮುಂದೆ ಬರುವುದು ಮಂಜುಭಾಷಿಣಿ, ಎನ್ಎಂಎಲ್ ಎಂದಾಗ ನಮಿತಾ ರಾವ್, ಪಲ್ಲಿ ಎಂದಾಗ ಪ್ರಶಾಂತ್ ನೀರಗುಂದ್, ಸಿಲ್ಲಿ ಎಂದಾಗ ರೂಪ ಪ್ರಭಾಕರ್ ಕಣ್ಣ ಮುಂದೆ ಬರುತ್ತಾರೆ.
ಹದಿನೇಳು ವರ್ಷದ ಹಿಂದಿನ ಧಾರಾವಾಹಿ ಇದೀಗ ಮತ್ತೆ ರೀಟೆಲಿಕಾಸ್ಟ್ ಆಗುತ್ತಿದೆ. ಅದು ಕೂಡಾ ವೀಕ್ಷಕರ ಒತ್ತಾಯದ ಮೇರೆಗೆ. ಸೋಮವಾರದಿಂದ ಶುಕ್ರವಾರದ ತನಕ ಬೆಳಗ್ಗೆ ಹತ್ತು ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಸಿಲ್ಲಿ ಲಲ್ಲಿ ಧಾರಾವಾಹಿಯ ಮರು ಪ್ರಸಾರದಿಂದ ವೀಕ್ಷಕರ ಜೊತೆಗೆ ಸಿಲ್ಲಿ ಲಲ್ಲಿಯ ಕಲಾವಿದರು ಕೂಡಾ ಖುಷಿಯಾಗಿದ್ದಾರೆ.
"ಸಿಲ್ಲಿ ಲಲ್ಲಿ ಧಾರಾವಾಹಿ ಬಂದು ಹದಿನೇಳು ವರುಷಗಳೇ ಕಳೆದಿವೆ. ಹದಿನೇಳು ವರುಷದ ನಂತರ ಮತ್ತೆ ವೀಕ್ಷಕರು ಅದನ್ನು ನೋಡಲು ಬಯಸುತ್ತಿದ್ದಾರೆ. ಇದು ತುಂಬಾ ಸಂತಸದ ವಿಚಾರ. ವೀಕ್ಷಕರ ಒತ್ತಾಯದ ಮೇರೆಗೆ ಸಿಲ್ಲಿ ಲಲ್ಲಿ ಪ್ರಸಾರ ಕಾಣುತ್ತಿರುವುದು ನಿಜಕ್ಕೂ ಖುಷಿ ತಂದಿದೆ. ಈಗಾಗಲೇ ಸುಮಾರು ಜನ ಫೋನ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ" ಎಂದು ಪಲ್ಲಿ ಪಾತ್ರಧಾರಿ ಪ್ರಶಾಂತ್ ಶೇಷಾದ್ರಿ ನೀರಗುಂದ್ ಹೇಳಿದ್ದಾರೆ.