ಅಭಿಮಾನಿಗಳ ಹೆಸರಿನಲ್ಲಿ ಸೆಲಬ್ರಿಟಿಗಳಿಗೆ ಕಿರುಕುಳ ನೀಡುವ ಎಷ್ಟೋ ಪ್ರಕರಣಗಳನ್ನು ನೋಡಿದ್ದೇವೆ. ಇದೀಗ ಕಿರುತೆರೆ ನಟಿ, ಪಾರು ಧಾರಾವಾಹಿಯ ಅನುಷ್ಕಾ ಖ್ಯಾತಿಯ ಮಾನಸಿ ಜೋಷಿ ಅವರಿಗೆ ಕೂಡಾ ಇದೇ ಅನುಭವ ಆಗಿದ್ದು ಈ ಸಂಬಂಧ ಮಾನಸಿ ಪೊಲೀಸರ ಮೊರೆ ಹೋಗಿದ್ದಾರೆ.
ಮಾನಸಿ ಜೋಷಿ ಅಭಿಮಾನಿಗಳು ಎಂಬ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆ ಸೃಷ್ಟಿಸಿರುವ ಕೆಲವರು ಆ ಪೇಜ್ ಮೂಲಕ ಇತರರಿಗೆ ಅಸಭ್ಯ ಸಂದೇಶ ಕಳಿಸುತ್ತಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಮಾನಸಿ ಜೋಷಿ ತಮ್ಮ ಅಸಲಿ ಖಾತೆಯಲ್ಲಿ ಬರೆದುಕೊಂಡಿದ್ದು, ನನ್ನ ಹೊಸ ಫ್ಯಾನ್ ಪೇಜ್ಗೆ ನಾನು ನಂಬರ್ ನೀಡಿಲ್ಲ. ಯೂಸರ್ ನೇಮ್ ಹಾಗೂ ಪಾಸ್ವರ್ಡ್ ನೀಡುವಂತೆ ಆತ ಕೇಳುತ್ತಿದ್ದಾನೆ. ನಾನು ಕೊಡಲು ನಿರಾಕರಿಸಿದ್ದರಿಂದ ನನಗೆ ಬೆದರಿಕೆ ಒಡ್ಡುತ್ತಿದ್ದಾನೆ.
ಆರಂಭದಲ್ಲಿ ನಾನು ಅದನ್ನು ನಿರ್ಲ್ಯಕ್ಷಿಸಿದೆ. ಆದರೆ ಆ ವ್ಯಕ್ತಿ ಮತ್ತೆ ಮತ್ತೆ ಹೊಸ ಪೇಜ್ ತೆರೆಯುತ್ತಿದ್ದಾನೆ. ನನ್ನ ಹೆಸರಿನಿಂದ ಯಾವುದಾದರೂ ಅಸಭ್ಯ ಸಂದೇಶ ಬಂದರೆ ಕೂಡಲೇ ದೂರು ನೀಡಿ. ನಾನು ಆ್ಯಕ್ಟಿವ್ ಇರುವುದು ಇದೊಂದೇ ಖಾತೆಯಲ್ಲಿ ಎಂದು ಮಾನಸಿ ಯೂಸರ್ಗಳ ಬಳಿ ಮನವಿ ಮಾಡಿದ್ದಾರೆ. ನಾನು ಇದರಿಂದ ಬಹಳ ಡಿಸ್ಟರ್ಬ್ ಆಗಿದ್ದೇನೆ. ನನ್ನ ಹೆಸರಿನಲ್ಲಿ ಇಲ್ಲಸಲ್ಲದ ಕಥೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಮಾನಸಿ ಜೋಷಿ ತಮ್ಮ ದು:ಖವನ್ನು ಹೊರಹಾಕಿದ್ದಾರೆ.
ಆದರೆ ಆ ವ್ಯಕ್ತಿಗೆ ಖಡಕ್ ವಾರ್ನಿಂಗ್ ನೀಡಿರುವ ಮಾನಸಿ ಜೋಷಿ, ಹೆಣ್ಣು ಮಕ್ಕಳಿಗೆ ಹೀಗೆ ಕಿರುಕುಳ ಕೊಡುವುದು ತಪ್ಪು ಎಂದು ತಿಳಿದಿದ್ದರೂ ನನಗೆ ಈ ರೀತಿ ಹಿಂಸೆ ನೀಡುತ್ತಿರುವ ನಿನಗೆ ತಕ್ಕ ಬುದ್ಧಿ ಕಲಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.