ಕಳೆದ ವರ್ಷ ಸಿನಿಮಾ, ಕಿರುತೆರೆ ಸೆಲಬ್ರಿಟಿಗಳು ವೈವಾಹಿಕ ಜೀವನಕ್ಕೆ ಕಾಲಿರಿಸಿರುವ ವಿಚಾರ ತಿಳಿದೇ ಇದೆ. ಈ ವರ್ಷ ಕೂಡಾ ಹಲವರು ಸಪ್ತಪದಿ ತುಳಿಯಲಿದ್ದಾರೆ. ಕೆಲವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕಿರುತೆರೆ ನಟ ಶ್ರೀರಾಮ್ ಕೂಡಾ ನಿಶ್ಚಿತಾರ್ಥ ಮಾಡಿಕೊಂಡಿದ್ದು ಇದೇ ವರ್ಷ ಮದುವೆಯಾಗಲಿದ್ದಾರೆ.
ಜನವರಿ 31 ಭಾನುವಾರ ಶ್ರೀರಾಮ್, ಸುಪ್ರಿಯಾ ಎಂಬುವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಎಂಎಸ್ಸಿ ಪದವೀಧರೆಯಾಗಿರುವ ಸುಪ್ರಿಯಾ, ರಿಸರ್ಚ್ ಸೈಂಟಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. "ಸುಪ್ರಿಯಾ ಅವರೊಂದಿಗೆ ನನ್ನ ನಿಶ್ಚಿತಾರ್ಥ ನಡೆದಿದೆ. ಇದೇ ವರ್ಷ ಏಪ್ರಿಲ್ 26 ರಂದು ನಾವು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದೇವೆ. ರಿಸರ್ಚ್ ಸೈಂಟಿಸ್ಟ್ ಆಗಿರುವ ಸುಪ್ರಿಯಾಗೆ ನನ್ನ ಬಣ್ಣದ ಬದುಕಿನ ಬಗ್ಗೆ ಗೌರವವಿದೆ. ನಟನಾ ಬದುಕಿನಲ್ಲಿ ಮುಂದುವರೆಯುವುದಕ್ಕೆ ಸದಾ ಕಾಲ ಅವಳ ಪ್ರೋತ್ಸಾಹವಿದೆ" ಎಂದು ಶ್ರೀರಾಮ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ನಾನ್ ಆರೋಗ್ಯವಾಗಿದ್ದೇನೆ, ಯಾಕ್ ಇಷ್ಟೊಂದ್ ಕಾಳಜಿ ಮಾಡ್ತೀರಾ? : ನಟಿ ಶರ್ಮಿಳಾ
'ರಾಧಾ ರಮಣ' ಧಾರಾವಾಹಿಯ ಸುಮೇಧ್ ಆಗಿ ನಟನಾ ಪಯಣ ಶುರು ಮಾಡಿದ ಶ್ರೀರಾಮ್, ಮಗಳು ಜಾನಕಿ ಧಾರಾವಾಹಿಯಲ್ಲಿ ಶ್ಯಾಮಲತ್ತೆ ಮಗ ಶ್ಯಾಮಸುಂದರ್ ಆಗಿ ಕಾಣಿಸಿಕೊಂಡಿದ್ದರು. ಇದೀಗ 'ಹೂಮಳೆ' ಧಾರಾವಾಹಿಯ ಉದಯ್ ಆಗಿ ನಟಿಸುತ್ತಿರುವ ಶ್ರೀರಾಮ್, ಬೆಳ್ಳಿತೆರೆಯಲ್ಲೂ ಮಿಂಚಿದ್ದಾರೆ. 'ದಿ ಪ್ಲ್ಯಾನ್' ಎಂಬ ಸಿನಿಮಾದಲ್ಲಿ ಅಭಿನಯಿಸಿರುವ ಇವರು 'ದರ್ಪಣ'ದಲ್ಲಿ ಖಳನಾಯಕರಾಗಿ ಮಿಂಚಿದ್ದಾರೆ. ಜೊತೆಗೆ ಗಿಮಿಕ್, ಪೆಟ್ಕಮ್ಮಿ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಶ್ರೀರಾಮ್ ಇದೀಗ ಕೃಷ್ಣ ಬೆಳ್ತಂಗಡಿ ಅವರ 'ರಿಪ್ಪನ್' ಸಿನಿಮಾದಲ್ಲಿ ಕೂಡಾ ನಟಿಸುತ್ತಿದ್ದಾರೆ.