ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೇವಂತಿ ಧಾರಾವಾಹಿಯಲ್ಲಿ ನಾಯಕಿ ಸೇವಂತಿ ಆಗಿ ಅಭಿನಯಿಸಿದ್ದ ಪಲ್ಲವಿ ಗೌಡ ಇದೀಗ ಪರಭಾಷೆಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಹೌದು, ತೆಲುಗಿನ ಚದುರಂಗಂ ಧಾರಾವಾಹಿಯಲ್ಲಿ ನಾಯಕಿಯಾಗಿ ಮೋಡಿ ಮಾಡುತ್ತಿರುವ ಪಲ್ಲವಿ ಗೌಡ ಸೇವಂತಿ ಧಾರಾವಾಹಿಯ ನಂತರ ಕನ್ನಡ ಕಿರುತೆರೆಯಲ್ಲಿ ಬಣ್ಣ ಹಚ್ಚಿದ್ದು ಕಡಿಮೆಯೇ.
ಸವಿರುಚಿ ಕಾರ್ಯಕ್ರಮದ ನಿರೂಪಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟ ಪಲ್ಲವಿ ಮೊದಲು ಅಭಿನಯಿಸಿದ್ದು, ಮನೆಯೊಂದು ಮೂರು ಬಾಗಿಲು ಧಾರಾವಾಹಿಯಲ್ಲಿ. ತದ ನಂತರ ಗಾಳಿಪಟ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ ಈಕೆ ಪರಿಣಯ, ಚಂದ್ರ ಚಕೋರಿ, ಗಾಳಿಪಟ, ಜೋಡಿ ಹಕ್ಕಿ, ಸೇವಂತಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
ಪ್ರೇಮ ಗೀಮ ಜಾನೇ ದೋ ಸಿನಿಮಾದ ಮೂಲಕ ಹಿರಿತೆರೆಗೆ ಹಾರಿದ ಪಲ್ಲವಿ ಗೌಡ ಮುಂದೆ ಕಿಡಿ ಹಾಗೂ ಕೊಡೆ ಮುರುಗ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ನೆಗೆಟಿವ್ ಪಾತ್ರದ ಮೂಲಕ ಕನ್ನಡ ಕಿರುತೆರೆ ಲೋಕದಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ಪಲ್ಲವಿಗೆ ತೆಲುಗು ಕಿರುತೆರೆ ಹೊಸದೇನಲ್ಲ. ಪಸುಪು ಕುಂಕುಮ (ಅರಶಿಣ ಕುಂಕುಮ) ಧಾರಾವಾಹಿಯಲ್ಲಿ ನಟಿಸಿದ್ದ ಪಲ್ಲವಿ ಇದೀಗ ಮಗದೊಂದು ಧಾರಾವಾಹಿಯ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ.