ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ಕಮಲಿ' ಕೂಡಾ ಒಂದು. ಓದುವ ಮಹದಾಸೆ ಹೊತ್ತ ಹೆಣ್ಣುಮಗಳೊಬ್ಬಳು ಶಿಕ್ಷಣ ಪಡೆಯಲು ಹಳ್ಳಿಯಿಂದ ನಗರಕ್ಕೆ ಬಂದು ಅಲ್ಲಿ ಏನೆಲ್ಲಾ ಕಷ್ಟ, ಅವಮಾನಗಳನ್ನು ಎದುರಿಸುತ್ತಾಳೆ ಎಂಬ ಕಥೆ ಹೊಂದಿರುವ ಧಾರಾವಾಹಿ ಇದು.
ಇನ್ನು, ಗ್ರಾಮೀಣ ಹೆಣ್ಣು ಮಗಳು ಕಮಲಿ ಪಾತ್ರದಲ್ಲಿ ನಿಮ್ಮೆಲ್ಲರನ್ನು ಸೆಳೆದಿರುವ ಈಕೆಯ ಹೆಸರು ಅಮೂಲ್ಯ ಗೌಡ. ಎರಡು ಜಡೆ ಕಟ್ಟಿ, ಲಂಗ ದಾವಣಿ ತೊಟ್ಟು ಪಕ್ಕಾ ಹಳ್ಳಿ ಶೈಲಿಯಲ್ಲಿ ಮಾತನಾಡುವ ಕಮಲಿ ಅಭಿನಯಕ್ಕೆ ಮನಸೋಲದವರಿಲ್ಲ. ಅರಮನೆ ನಗರಿ, ಮೈಸೂರಿನ ಚೆಲುವೆ ಅಮೂಲ್ಯ ಗೌಡ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸ್ವಾತಿಮುತ್ತು' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದರು. ಮುಂದೆ 'ಪುನರ್ ವಿವಾಹ'ದಲ್ಲಿ ಸ್ವಾತಿ ಪಾತ್ರದಲ್ಲಿ ನಟಿಸಿದ ಚೆಂದುಳ್ಳಿ ಚೆಲುವೆ ವೀಕ್ಷಕರಿಗೆ ಹತ್ತಿರವಾದದ್ದು ಉದಯ ವಾಹಿನಿ ಮೂಲಕ. 'ಅರಮನೆ' ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಮೂಲ್ಯ ಇಂದು ಸೀರಿಯಲ್ ಪ್ರಿಯರ ಪ್ರೀತಿಯ ಕಮಲಿ.
ಕೆಲವೇ ಕೆಲವು ಧಾರಾವಾಹಿಗಳಲ್ಲಿ ಅಮೂಲ್ಯ ಅಭಿನಯಿಸಿದ್ದರೂ ಕಮಲಿಯನ್ನು ವೀಕ್ಷಕರು ಎಂದೂ ಮರೆತಿಲ್ಲ. ನಮಗೆ ನೀಡಿದ ಪಾತ್ರಗಳಿಗೆ ಜೀವ ತುಂಬುವುದೇ ಕಲಾವಿದರಾದ ನಮಗೆ ಬಹು ದೊಡ್ಡ ಜವಾಬ್ದಾರಿ. ನಾವು ಮಾಡುವ ಪಾತ್ರ ಜನರ ಮನಸ್ಸಿಗೆ ತಲುಪಿದಾಗ ಮಾತ್ರ ನಾವು ಈ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎನ್ನುವ ಅಮೂಲ್ಯ ನಟನೆಯ ಬಗ್ಗೆ ಯಾವುದೇ ತರಬೇತಿ ಪಡೆದವರಲ್ಲ. ಸಿನಿಮಾಗಳಿಂದ ಸಾಕಷ್ಟು ಆಫರ್ಗಳಿದ್ದರೂ ಸದ್ಯ ಅಮೂಲ್ಯ ಚಿತ್ತ ಏನಿದ್ದರೂ ಕಮಲಿಯತ್ತ. ಎರಡು ಕಡೆ ಏಕಕಾಲದಲ್ಲಿ ಗಮನ ಹರಿಸಲು ಕಷ್ಟ ಎಂಬುದು ಅಮೂಲ್ಯ ಅಭಿಪ್ರಾಯ. ಜೀ ಕುಟುಂಬ ಅವಾರ್ಡ್ 2019ರ ಉತ್ತಮ ನಟಿ ಪ್ರಶಸ್ತಿ ಪಡೆಯುವ ಮೂಲಕ ಜನರಿಗೆ ತಾನು ಎಷ್ಟು ಹತ್ತಿರವಾಗಿದ್ದೇನೆ ಎಂಬುದನ್ನು ನಿರೂಪಿಸಿ ತೋರಿಸಿದ್ದಾರೆ ಅಮೂಲ್ಯ.